ಮಾಸ್ಕೊ : ವಿಶ್ವದಾದ್ಯಂತ ಹೆಮ್ಮಾರಿ ಕೊರೊನಾ ವೈರಸ್ ನ ಆರ್ಭಟ ಮುಂದುವರಿದೆ. ಇದಕ್ಕೆ ಕಡಿವಾಣ ಹಾಕಲು ಹಲವಾರು ದೇಶದಲ್ಲಿ ಲಸಿಕೆ ಕಂಡು ಹಿಡಿಯಲು ನಾನಾ ಕಸರತ್ತುಗಳನ್ನು ನಡೆಸುತ್ತಿವೆ. ಇದರ ಮಧ್ಯೆ ಮಾನವನ ಮೇಲೆ ಪರೀಕ್ಷೆ ನಡೆಸಿ ಎರಡು ತಿಂಗಳೊಳಗೆ ಮಾಸ್ಕೋದ ಗಮಲೇಯಾ ಸಂಸ್ಥೆ ಅಭಿವೃದ್ಧಿಪಡಿಸಿರುವ ವಿಶ್ವದ ಮೊದಲ ಕೋವಿಡ್-19 ಲಸಿಕೆಗೆ ರಷ್ಯಾದ ಆರೋಗ್ಯ ಸಚಿವಾಲಯ ನಿಯಂತ್ರಕ ಅನುಮೋದನೆ ನೀಡಿದೆ ಎಂದು ಅಧ್ಯಕ್ಷ ವ್ಲಾದಿಮರ್ ಪುಟಿನ್ ಹೇಳಿದ್ದಾರೆ.
ಸರ್ಕಾರಿ ಸಭೆಯೊಂದರಲ್ಲಿ ಮಾತನಾಡಿರುವ ಅವರು, ಇಂದು ಬೆಳಗ್ಗೆ ಕೊರೊನಾ ವೈರಸ್ ಗೆ ಲಸಿಕೆ ನೋಂದಾವಣೆಗೊಂಡಿದ್ದು, ಬಹುಶಃ ಇದು ವಿಶ್ವದಲ್ಲೇ ಮೊದಲು ಎಂದಿದ್ದಾರೆ. ಅಲ್ಲದೆ ಈ ಲಸಿಕೆಯನ್ನು ತನ್ನ ಮಗಳಿಗೆ ನೀಡಲಾಗಿದೆ ಎಂದು ಪುಟಿನ್ ಹೇಳಿದ್ದು, ಲಸಿಕೆ ಸಂಶೋಧನೆಯ ಭಾಗವಾಗಿದ್ದ ನನ್ನ ಮಗಳ ದೇಹದ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಲಸಿಕೆ ತೆಗೆದುಕೊಂಡ ಒಂದು ದಿನದ ಬಳಿಕ 37 ಡಿಗ್ರಿ ತಲುಪಿತ್ತು ಎಂದಿದ್ದಾರೆ.
ಪ್ರಪಂಚದಲ್ಲೇ ಮೊದಲ ದೇಶವಾಗಿ ಕೊರೊನಾ ವೈರಸ್‌ಗೆ ಲಸಿಕೆ ಕಂಡು ಹಿಡಿದಿದ್ದು, ಈಗಾಗಲೇ ಕ್ಲಿನಿಕಲ್ ಟ್ರಯಲ್ (ಮನುಷ್ಯನ ಮೇಲಿನ ಪ್ರಯೋಗ) ಯಶಸ್ವಿಯಾಗಿದೆ. ಹೀಗಾಗಿ ಲಸಿಕೆಯ ನೋಂದಣಿ ಕಾರ್ಯ ಪೂರ್ಣಗೊಳಿಸಿದೆ. ಅಕ್ಟೋಬರ್ ತಿಂಗಳಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಸಾಮೂಹಿಕವಾಗಿ ಲಸಿಕೆ ಉತ್ಪಾದನೆ ಮಾಡಲು ರಷ್ಯಾ ಮುಂದಾಗಿದೆ ಎಂದು ತಿಳಿದು ಬಂದಿದೆ.








