ಕೊರೊನಾ ವೈರಸ್ ಇಡಿ ದೇಶದಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಸೋಂಕು ನಿಯಂತ್ರಣಕ್ಕಾಗಿ ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಇದರಿಂದ ಜನರ ಆತಂಕ ಹೆಚ್ಚಾಗಿದೆ. ಜೊತೆಗೆ ನಿನ್ನೆಯಷ್ಟೇ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೇರೆ ದೇಶಗಳಿಗೆ ಹೋಲಿಸಿದರೇ ಭಾರತ ಕೊರೊನಾ ನಿಯಂತ್ರಣ ಮಾಡುವುದರಲ್ಲಿ ಯಶ್ವಸಿಯಾಗಿದೆ ಎಂದು ಹೇಳಿದ್ದರು. ಇದೀಗ ಮುಂಬೈನಲ್ಲಿ ಸೋಂಕಿತರ ಸಂಪರ್ಕದಲ್ಲಿ ಇದ್ದ ಸುಮಾರ 6 ಲಕ್ಷ ಜನರನ್ನ ಕ್ವಾರೆಂಟೈನ್ ನಲ್ಲಿ ಇಡಲಾಗಿದೆ. ಇದರಲ್ಲಿ ಎಷ್ಟು ಜನರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಳ್ಳುತ್ತದೆಯೋ ಎಂಬ ದುಗುಡ ಮಹಾರಾಷ್ಟ್ರ ಸರ್ಕಾರಕ್ಕಿದೆ.
ಮಹಾರಾಷ್ಟ್ರದಲ್ಲಿ ಕೊರೊನಾ ಮಹಾಮಾರಿಯಂತೆ ಕಾಡುತ್ತಿದೆ. ಸೋಂಕಿತರ ಸಂಖ್ಯೆ ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮಹಾರಾಷ್ಟ್ರ ಸರ್ಕಾರ ಕಠಿಣ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಸೋಂಕು ನಿಯಂತ್ರಣ ಸವಾಲಾಗಿ ಪರಿಣಮಿಸಿದೆ. ಮುಂಬೈನಲ್ಲಿ ಆಸ್ಪತ್ರೆಗಳ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಡುತ್ತಿರುವುದು ಮತ್ತಷ್ಟು ಆತಂಕ ತಂದಿದೆ. ಜೊತೆಗೆ ,ಮುಂಬೈನಲ್ಲಿ ಸೋಂಕಿತರ ಸಂಪರ್ಕದಲ್ಲಿದ್ದ ಸುಮಾರು 6 ಲಕ್ಷ ಮಂದಿಯನ್ನು
ಕ್ವಾರೆಂಟೈನ್ ಮಾಡಲಾಗಿದೆ. ಧಾರಾವಿ ಸ್ಲಂನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. 40ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಪಾಸಿಟಿವ್ ಬಂದಿದೆ. ಇನ್ನು ಇಲ್ಲಿನ 9 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಆರೋಗ್ಯ ಇಲಾಖೆಯ 150ಕ್ಕೂ ಹೆಚ್ಚು ಮಂದಿ ಧಾರಾವಿಯಲ್ಲಿ ಮನೆಮನೆಗೆ ತೆರಳಿ ನಿವಾಸಿಗಳ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೀಲ್ ಡೌನ್ ಮಾಡಲಾಗಿದೆ. ಇನ್ನೊದೆಡೆ ಲಾಕ್ ಡೌನ್ ವಿಸ್ತರಣೆ ಆದ ಮೇಲೆ ಅಲ್ಲಿಯ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಕಳಿಸಿ ಎಂದು ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆ ನಿಜಕ್ಕೂ ಮಹಾರಾಷ್ಟ್ರ ಸರ್ಕಾರಕ್ಕೆ ಸವಾಲಾಗಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ ಸಹ ಹೈಅಲರ್ಟ್ ಘೋಷಿಸಿದೆ. ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ ಮಾರಕ ಸೋಂಕು ದೃಢಪಟ್ಟಿದೆ. ಇದು ಮುಂಬೈಯಲ್ಲಿ ಮತ್ತಷ್ಟು ತಲ್ಲಣ ಸೃಷ್ಟಿ ಮಾಡಿದೆ. ಆಸ್ಪತ್ರೆಯ 10 ಜನ ಸಿಬ್ಬಂದಿಗೆ ಕೊರೊನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡಿದೆ. ಅಲ್ಲದೆ ಇಲ್ಲಿಯವರೆಗೂ 35 ಜನರ ಆಸ್ಪತ್ರೆಯ ಸಿಬ್ಬಂದಿಗೆ ಕೊರೊನಾ ವೈರಸ್ ಗೆ ತುತ್ತಾಗಿದ್ದಾರೆ. ಆಸ್ಪತ್ರೆಯಲ್ಲಿ ಮೂವರು ಕೊರೊನಾ ಸೋಂಕಿತರು ಪತ್ತೆಯಾದ ಹಿನ್ನಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ಈ 10 ಮಂದಿಯನ್ನು ಕ್ವಾರೆಂಟೈನ್ ಮಾಡಲಾಗಿತ್ತು. ಈಗ ಎಲ್ಲರಲ್ಲೂ ಸೋಂಕು ದೃಢಪಟ್ಟಿದೆ. ಇದರಿಂದ ಮಹಾರಾಷ್ಟ್ರ ಸರ್ಕಾರಕ್ಕೆ ತಲೆ ನೋವು ಹೆಚ್ಚಾಗಿದೆ.








