ಮಂಗಳೂರು : ಹೊರ ರಾಜ್ಯದಿಂದ ಬಂದವರಿಗೆ ಇನ್ಮುಂದೆ ಸರ್ಕಾರಿ ಬದಲು ಹೋಂ ಕ್ವಾರೆಂಟೈನ್ ಗೆ ಸೀಮಿತ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಯು.ಟಿ ಖಾದರ್, ರಾಜ್ಯ ಸರ್ಕಾರದ ಹೊಸ ಆದೇಶದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ನಿರ್ಧಾರ ಏನು ಎಂಬುದೇ ನಮಗೆ ಅರ್ಥವಾಗುತ್ತಿಲ್ಲ. ಒಬ್ಬ ಬಿಜೆಪಿ ಸಂಸದೆ ಮಹಾರಾಷ್ಟ್ರದವರು ಇಲ್ಲಿಗೆ ಬರಬೇಡಿ ಅಂತಾರೆ. ಸರ್ಕಾರ ನೋಡಿದ್ರೆ ಕ್ವಾರೆಂಟೈನ್, ಟೆಸ್ಟ್ ಏನೂ ಇಲ್ಲದೇ ಮನೆಗೆ ಹೋಗಿ ಅಂತಿದೆ. ಹೊರ ರಾಜ್ಯದಿಂದ ಬಂದವರು ಮನೆಗೆ ಹೋದ್ರೆ ಗ್ರಾಮಸ್ಥರು ಬಿಡ್ತಾರಾ? ಈ ಬಗ್ಗೆ ನೆರೆಹೊರೆಯವರು ಚರ್ಚೆ ಮಾಡೋದಿಲ್ವಾ? ಹಾಗಾಗಿ ಇದು ಗ್ರಾಮಗ್ರಾಮಗಳಲ್ಲಿ ವೈಮನಸ್ಸು ಉಂಟು ಮಾಡುತ್ತದೆ, ಪರಸ್ಪರ ನೆರೆಮನೆಯಲ್ಲಿ ಸಮಸ್ಯೆ ಆಗುತ್ತೆ. ಹೀಗಾಗಿ ನನ್ನ ಕ್ಷೇತ್ರದಲ್ಲಿ ಯಾವ ರಾಜ್ಯದಿಂದ ಬಂದರೂ ಕ್ವಾರೆಂಟೈನ್ ಕಡ್ಡಾಯವಾಗಿ ಮಾಡಬೇಕು ಎಂದು ಹೇಳಿದ್ದೇನೆ. ಹಾಗಾಗಿ ಬೆಳ್ಮ ಗ್ರಾ.ಪಂ ನೋಡಲ್ ಕಚೇರಿಯಾಗಿ ಮಾಡಿದ್ದೇವೆ. ಮಹಾರಾಷ್ಟ್ರ, ತಮಿಳುನಾಡು ಎಲ್ಲಿಂದ ಬಂದರೂ ಕ್ವಾರೆಂಟೈನ್ ಮಾಡಿಯೇ ಮನೆಗೆ ಕಳುಹಿಸೋದು. ಊರಿಗೆ ಹೋದಾಗ ಗೊಂದಲ, ಸಮಸ್ಯೆಯಾಗದಂತೆ ನೋಡಿಕೊಳ್ತೇವೆ. ಕ್ವಾರೆಂಟೈನ್ ಟ್ರೈನ್ ಅಂತ ಮಾಡಿದ್ದು ಎಲ್ಲಿಗೆ ಹೋಯಿತು?
ಮಂಗಳೂರಿಗೆ ಯಾವುದೇ ರಾಜ್ಯದಿಂದ ಬಂದರೂ ಸರ್ಕಾರಿ ಕ್ವಾರೆಂಟೈನ್ ಮಾಡಲಿ. ಇದು ಮನೆಯವರಿಗೂ ಒಳ್ಳೆಯದು, ಊರಿನವರಿಗೂ ಒಳ್ಳೆಯದು. ಉಡುಪಿಯಲ್ಲಿ ಜಾಸ್ತಿ ಬಂತು ಅಂತಾರೆ, ಅಲ್ಲಿ ಟೆಸ್ಟಿಂಗ್ ಎಷ್ಟಿದೆ ? ನಮ್ಮಲ್ಲಿ ಡೈಲಿ ಎಷ್ಟು ಟೆಸ್ಟ್ ಮಾಡ್ತಾರೆ ? ಟೆಸ್ಟ್ ಮಾಡದೇ ಎಮರ್ಜೆನ್ಸಿ ಆಗಿ ಸಾವಾದ್ರೆ ಏನು ಮಾಡೋದು ? ಪಾಸಿಟಿವ್ ಬಂದ್ರೆ ಸಮಸ್ಯೆ ಇಲ್ಲ, ಗುಣಮುಖ ಮಾಡಬಹುದು. ಟೆಸ್ಟ್ ಮಾಡ್ಲಿಕ್ಕೆ ಏನು ಪ್ರಾಬ್ಲಂ,ಲ್ಯಾಬ್ ಇಲ್ವಾ? ರ್ಯಾಪಿಡ್ ಟೆಸ್ಟ್ ಕಿಟ್ ಎಲ್ಲಿಗೆ ಹೋಯ್ತು? ಏನಾಯ್ತು? ಅದನ್ನ ಮಾಡಿ, ಆಗ ದೇಹದಲ್ಲಿ ರೋಗ ಇದ್ಯಾ ಇಲ್ವಾ ಅನ್ನೋದಾದ್ರೂ ಗೊತ್ತಾಗುತ್ತದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.








