ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮನೆಯ ಮುಂದೆ ಕ್ವಾರಂಟೈನ್ ನೋಟಿಸ್ !
ಹೊಸದಿಲ್ಲಿ, ಜೂನ್ 13: ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮನೆಯ ಮುಂದೆ ಕ್ವಾರಂಟೈನ್ ನೋಟಿಸ್ ಅಂಟಿಸಲಾಗಿದ್ದು, ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಮನಮೋಹನ್ ಸಿಂಗ್ ರವರ ದೆಹಲಿಯ ಮೋತಿಲಾಲ್ ನೆಹರು ರಸ್ತೆಯಲ್ಲಿನ ನಿವಾಸದ ಎದುರು ಕ್ವಾರಂಟೈನ್ ನೋಟಿಸ್ ಅಂಟಿಸಲಾಗಿದೆ.
ಈ ನಡುವೆ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಮನೆಯಲ್ಲಿ ಕೆಲಸದವರ ಮಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೆಲಸದ ಸಿಬ್ಬಂದಿಗಳು ವಾಸಿಸುವ ಕ್ವಾಟ್ರಸ್ ನಲ್ಲಿ ಆಕೆ ಮತ್ತು ಆಕೆಯ ಕುಟುಂಬ ವಾಸಿಸುತ್ತಿದ್ದ ಹಿನ್ನಲೆಯಲ್ಲಿ ಅವರನೆಲ್ಲಾ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಅಷ್ಟೇ ಅಲ್ಲ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಮುಂಜಾಗೃತ ಕ್ರಮವಾಗಿ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮನಮೋಹನ್ ಸಿಂಗ್ ಅವರ ಮನೆಯ ಮುಂದೆ ಕ್ವಾರಂಟೈನ್ ನೋಟಿಸ್ ಅನ್ನು ಲಗತ್ತಿಸಲಾಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.
ಮನಮೋಹನ್ ಸಿಂಗ್ ಮನೆಯಲ್ಲೇ ಇದ್ದು, ಕ್ವಾರಂಟೈನ್ ಗೆ ಒಳಗಾಗಿದ್ದರೂ ಪಕ್ಷದ ಚಟುವಟಿಕೆಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಿರಂತರವಾಗಿ ಭಾಗವಹಿಸುತ್ತಿದ್ದಾರೆ. ನಿನ್ನೆ ನಡೆದ ಕಾಂಗ್ರೆಸ್ ಪಕ್ಷದ ಮೀಟಿಂಗ್ನಲ್ಲಿ ಕೂಡ ಮನಮೋಹನ್ ಸಿಂಗ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದರು ಎಂದು ಕಾಂಗ್ರೆಸ್ ನಾಯಕರು ಮಾಹಿತಿ ನೀಡಿದ್ದಾರೆ.