ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ನಾಯಕ ಜಾಯ್ ರೂಟ್ ಅಲಭ್ಯ
ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಜುಲೈ 8ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಈಗಾಗಲೇ ವೆಸ್ಟ್ ಇಂಡೀಸ್ ತಂಡ ಪ್ರಕಟಗೊಂಡಿದೆ. ಇನ್ನೊಂದೆಡೆ ಇಂಗ್ಲೆಂಡ್ ತಂಡ ಅಭ್ಯಾಸದಲ್ಲಿ ನಿರತವಾಗಿವೆ. ಕೊರೋನಾ ವೈರಸ್‍ನಿಂದಾಗಿ ಉಭಯ ತಂಡಗಳು ಕೆಲವೊಂದು ಕಟ್ಟು ನಿಟ್ಟಿನ ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ.
ಈ ನಡುವೆ ಇಂಗ್ಲೆಂಡ್ ನಾಯಕ ಜಾಯ್ ರೂಟ್ ಅಲಭ್ಯರಾಗುವ ಸಾಧ್ಯತೆ ಇದೆ. ಯಾಕಂದ್ರೆ ಜಾಯ್ ರೂಟ್ ಅವರು ಎರಡನೇ ಬಾರಿ ಅಪ್ಪನಾಗುತ್ತಿದ್ದಾರೆ. ಅಲ್ಲದೆ ಮೊದಲ ಟೆಸ್ಟ್ ಪಂದ್ಯದ ವೇಳೆಯಲ್ಲಿ ಅವರು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹಾಗೇ ಅವರು ಏಳು ದಿನಗಳ ಕಾಲ ಕ್ವಾರಂಟೈನ್‍ನಲ್ಲಿರುತ್ತಾರೆ. ಹೀಗಾಗಿ ಅವರು ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಸೂಚನೆಯಂತೆ ಆಟಗಾರರು ಕಟ್ಟು ನಿಟ್ಟಿನ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ.
ಜಾಯ್ ರೂಟ್ ಅವರು ಕೂಡ ಒಂದು ವಾರಗಳ ಕ್ವಾರಂಟೈನ್ ಬಳಿಕವೇ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ.
ಮೊದಲ ಟೆಸ್ಟ್ ಪಂದ್ಯ ಜುಲೈ 9ರಿಂದ ಹಾಗೂ ಎರಡನೇ ಟೆಸ್ಟ್ ಪಂದ್ಯ ಜುಲೈ 16ರಿಂದ ಮತ್ತು ಜುಲೈ 24ರಿಂದ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ. ಈಗಾಗಲೇ ವೆಸ್ಟ್ ಇಂಡೀಸ್ ತಂಡ ಜೂನ್ 9ರಂದು ಇಂಗ್ಲೆಂಡ್‍ಗೆ ಆಗಮಿಸಲಿದೆ. ಹೋಮ್ ಕ್ವಾರಂಟೈನ್ ನಂತರ ವಿಂಡೀಸ್ ಆಟಗಾರರು ಅಭ್ಯಾಸ ನಡೆಸಲಿದ್ದಾರೆ. ಇನ್ನೊಂದೆಡೆ ವೆಸ್ಟ್ ಇಂಡೀಸ್ ನ ಮೂವರು ಆಟಗಾರರು ಇಂಗ್ಲೆಂಡ್ ಸರಣಿಯಿಂದ ಹೊರಗುಳಿದಿದ್ದಾರೆ. ಅಲ್ಲದೆ ವೆಸ್ಟ್ ಇಂಡೀಸ್ ತಂಡ ಹೊಸ ಮುಖಗಳಿಗೆ ಅವಕಾಶ ನೀಡಿದೆ.
ಕೊರೋನಾ ವೈರಸ್ ನಿಂದಾಗಿ ಕಳೆದ ಎರಡುವರೆ ತಿಂಗಳಿಂದ ವಿಶ್ವ ಕ್ರಿಕೆಟ್ ಸ್ತಬ್ದಗೊಂಡಿತ್ತು. ಇದೀಗ ಇಂಗ್ಲೆಂಡ್ ನಲ್ಲಿ ಕ್ರಿಕೆಟ್ ಪಂದ್ಯಕ್ಕೆ ಮತ್ತೆ ಚಾಲನೆ ಸಿಗಲಿದೆ.








