ಶುಬ್ಮನ್ ಗಿಲ್ ಜೊತೆ ಇನಿಂಗ್ಸ್ ಆರಂಭಿಸೋದು ಯಾರು..?
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದ 11ರ ಬಳಗದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಅನ್ನೋದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ರೋಹಿತ್ ಶರ್ಮಾ ತಂಡವನ್ನು ಸೇರಿಕೊಂಡಿರುವುದು ಪ್ಲಸ್ ಪಾಯಿಂಟ್ ಆಗಿದೆ. ಆದ್ರೆ ರೋಹಿತ್ ಶರ್ಮಾ ಯಾವ ಕ್ರಮಾಂಕದಲ್ಲಿ ಆಡ್ತಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.
ಇನ್ನೊಂದೆಡೆ ಟೀಮ್ ಇಂಡಿಯಾದ ಆರಂಭಿಕ ಮಯಾಂಕ್ ಅಗರ್ ವಾಲ್ ಮತ್ತು ಹನುಮ ವಿಹಾರಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ. ಆಸಿಸ್ ನೆಲದಲ್ಲಿ ರನ್ ಗಳಿಸಲು ಒದ್ದಾಟ ನಡೆಸುತ್ತಿದ್ದಾರೆ. ಹೀಗಾಗಿ ಇವರಿಬ್ಬರ ಸ್ಥಾನದಲ್ಲಿ ರೋಹಿತ್ ಮತ್ತು ರಾಹುಲ್ ಆಡಬೇಕು ಅನ್ನೋ ಲೆಕ್ಕಚಾರಗಳು ಶುರುವಾಗಿವೆ.
ಈ ನಡುವೆ ಆರಂಭಿಕನಾಗಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿರುವ ಶುಬ್ಮನ್ ಗಿಲ್ ಸ್ಥಾನ ಗ್ಯಾರಂಟಿಯಾಗಿದೆ. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಗಮನ ಸೆಳೆಯುವಂತಹ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಗಿಲ್ ಸ್ಥಾನಕ್ಕೆ ಏನು ತೊಂದರೆ ಇಲ್ಲ.
ಆದ್ರೆ ಗಿಲ್ ಜೊತೆ ಯಾರು ಇನಿಂಗ್ಸ್ ಆರಂಭಿಸ್ತಾರೆ ಅನ್ನೋದು ಮುಖ್ಯ ಪ್ರಶ್ನೆಯಾಗಿದೆ. ರೋಹಿತ್ ಶರ್ಮಾ ಗಿಲ್ ಜೊತೆ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಕೂಡ ಹೆಚ್ಚಿದೆ. ಆದ್ರೆ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ಕ್ರಿಕೆಟ್ ನಲ್ಲಿ ಇನಿಂಗ್ಸ್ ಆರಂಭಿಸದೇ ತುಂಬಾ ಸಮಯವಾಗಿದೆ. ಹೀಗಾಗಿ ಅವರು ಹನುಮ ವಿಹಾರಿ ಜಾಗದಲ್ಲಿ ಆಡಬೇಕು ಅನ್ನೋದು ಕೆಲವು ಕ್ರಿಕೆಟ್ ಪಂಡಿತರ ಅಭಿಪ್ರಾಯವಾಗಿದೆ.
ಅದೇ ರೀತಿ ಮಯಾಂಕ್ ಅಗರ್ ವಾಲ್ ಸ್ಥಾನದಲ್ಲಿ ಕೆ.ಎಲ್. ರಾಹುಲ್ ಇನಿಂಗ್ಸ್ ಆರಂಭಿಸಬೇಕು ಅನ್ನೋ ಅಭಿಪ್ರಾಯವೂ ಕೇಳಿಬರುತ್ತಿದೆ. ಯಾರು ಏನೇ ಹೇಳಿದ್ರೂ ಅಂತಿಮ ನಿರ್ಧಾರ ಟೀಮ್ ಮ್ಯಾನೇಜ್ ಮೆಂಟ್ ನದ್ದಾಗಿರುತ್ತದೆ.
ಅದು ಅಲ್ಲದೆ ಐವರು ಬೌಲರ್ ಗಳು ಮತ್ತು ಆರು ಬ್ಯಾಟ್ಸ್ ಮೆನ್ ಗಳ ಕಾಂಬಿನೇಷನ್ ನಲ್ಲಿ ಆಡುವುದು ಉತ್ತಮ ಅನ್ನೋ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲಾನ್ ಕೂಡ ವರ್ಕ್ ಔಟ್ ಆಗಿದೆ.
ಹೀಗಾಗಿ ಜಸ್ಪ್ರಿತ್ ಬೂಮ್ರಾ, ಮಹಮ್ಮದ್ ಸಿರಾಜ್, ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜೊತೆ ಐದನೇ ಬೌಲರ್ ಆಗಿ ಶಾರ್ದೂಲ್ ಥಾಕೂರ್ ಅಥವಾ ನಟರಾಜನ್ ತಂಡವನ್ನು ಸೇರಿಕೊಳ್ಳುವ ಸಾದ್ಯತೆ ಇದೆ. ಗಾಯದಿಂದ ಬಳಲುತ್ತಿರುವ ಉಮೇಶ್ ಯಾದವ್ ಸರಣಿಯಿಂದ ಹೊರನಡೆದಿದ್ದಾರೆ.
ಈ ನಡುವೆ ಡಿಸೆಂಬರ್ 30ರಂದು ಟೀಮ್ ಇಂಡಿಯಾವನ್ನು ಸೇರಿಕೊಂಡಿರುವ ರೋಹಿತ್ ಶರ್ಮಾ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಮೂರನೇ ಟೆಸ್ಟ್ ಪಂದ್ಯ ಜನವರಿ ಏಳರಿಂದ ಸಿಡ್ನಿಯಲ್ಲಿ ಶುರುವಾಗಲಿದೆ. ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1-1ರಿಂದ ಸಮಬಲದಲ್ಲಿವೆ.