ಬೆಂಗಳೂರು : ಮಾಜಿ ಮುಖ್ಯಮಂತ್ರಿ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರೇ, ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಸುವಲ್ಲಿ ನಮ್ಮ ಸರ್ಕಾರ ಸಮರ್ಥವಿದೆ. ಈಗಾಗಲೇ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ರೈತರಿಗೂ ಯೂರಿಯಾ ಗೊಬ್ಬರ ಪೂರೈಸುವಲ್ಲಿ ಸಶಕ್ತವಾಗಿದೆ. ಆಡಿದ ಮಾತು ಬಿಟ್ಟ ಬಾಣ ಕಳೆದ ಸಮಯ ಮತ್ತು ಕೈತಪ್ಪಿ ಹೋದ ಅವಕಾಶ ಇವು ಎಂದಿಗೂ ಮರಳಿ ಬಾರವು ಎಂದು ಕುಟುಕಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಗೆ ಹೆಚ್ ಡಿಕೆ, “ಪೋಜು” ಕೊಡುವುದು ಬಿಟ್ಟು ಮೈಬಗ್ಗಿಸಿ ಕೆಲಸ ಮಾಡಿ ತೋರಿಸಿ ಎಂದು ತಿರುಗೇಟು ನೀಡಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಕುಮಾರಸ್ವಾಮಿ, “ಕೊಪ್ಪಳ ಜಿಲ್ಲೆಯ ರೈತರೊಬ್ಬರು ವಾರದಿಂದ ಅಲೆದರೂ ಒಂದು ಚೀಲ ಗೊಬ್ಬರ ಸಿಕ್ಕಿಲ್ಲ ಎಂದು ಅಳುತ್ತಿದ್ದರೆ, ಆಸ್ಪತ್ರೆಗಳಲ್ಲಿ ಆಕ್ಸಿಜನ್ ಇಲ್ಲದೇ ರೋಗಿಗಳು ನರಳಾಡುತ್ತಿರುವುದು ಸರ್ಕಾರ ಸಶಕ್ತವಾಗಿರುವ ಲಕ್ಷಣವೋ? ನಿಶಕ್ತವಾಗಿರುವ ಲಕ್ಷಣವೋ? ಎಂದು ಪ್ರಶ್ನಿಸಿದ್ದಾರೆ.
ಎರಡನೇ ಟ್ವೀಟ್ ನಲ್ಲಿ “ಮಾಧ್ಯಮಗಳ ವರದಿಗಳನ್ನು ಗಮನಿಸುವಷ್ಟು ವ್ಯವಧಾನವಿರದ ನೀವು ಮಾಧ್ಯಮಗಳ ಮುಂದೆ ಕುಳಿತು “ಪೋಜು” ಕೊಡುವುದು ಬಿಟ್ಟು ಮೈಬಗ್ಗಿಸಿ ಕೆಲಸ ಮಾಡಿ ತೋರಿಸಿ. ಕರೋನಾ ಸೋಂಕಿನ ವಿಷಯದಲ್ಲಿ ಆರು ತಿಂಗಳಿಂದ ಮಾತಿನ ಮಂಟಪ ಕಟ್ಟಿದರೆ ಹೊರತು ಅನುಷ್ಠಾನದಲ್ಲಿ ಮಕಾಡೆ ಮಲಗಿದ್ದು ರಾಜ್ಯದ ಜನತೆಗೆ ಗೊತ್ತಿದೆ.
ಕರೋನಾ ಸೋಂಕಿತರು ಬೆಡ್ ಗಳಿಲ್ಲದೆ, ಅಂಬುಲೆನ್ಸ್ ದಕ್ಕದೆ, ಸೂಕ್ತ ವೈದ್ಯಕೀಯ ಚಿಕಿತ್ಸೆಗಾಗಿ ಪರದಾಡುವಾಗ ನಿಮ್ಮ ಸಶಕ್ತತೆ ಎಲ್ಲಿ ಅಡಗಿತ್ತು? ಕರೋನಾ ನಿಯಂತ್ರಣಕ್ಕೆ ಎಷ್ಟೊಂದು ಸಚಿವರು? ಕಮೀಷನ್ ದಂಧೆ, ಸಮನ್ವಯದ ಕೊರತೆಯಿಂದ ಬಳಲಿ ಹೈರಾಣಾದಿರಿ ಎಂದು ಕುಟುಕಿದ್ದಾರೆ.
ಮೂರನೇ ಟ್ವೀಟ್ ನಲ್ಲಿ, “ಅಧಿಕಾರ ಇದ್ದಾಗಲೂ ಕೊಟ್ಟ ಮಾತು ಉಳಿಸಿ ಕೊಳ್ಳಲಾಗದವರ ಹಾಗೂ ರೋಗಗ್ರಸ್ತ ಮನಸ್ಸಿನವರ ಬಗ್ಗೆ ನನಗೆ ಮರುಕವಿದೆ. ಪತ್ರಿಕಾಗೋಷ್ಠಿ ಕರೆಯದೆ “ಈ ದಿನ ಪತ್ರಿಕಾಗೋಷ್ಠಿ ಇರುವುದಿಲ್ಲ” ಎಂದು ಸ್ಪಷ್ಟನೆ ನೀಡುವ ಬೌದ್ಧಿಕ ದಾರಿದ್ರ್ಯ ನಿಮ್ಮಂತೆ ನನಗೆ ಬಂದೊದಗಿಲ್ಲ ಎಂದು ಕಿಡಿಕಾರಿದ್ದಾರೆ.
ಕೊನೆಯ ಟ್ವೀಟ್ ನಲ್ಲಿ, ನುಡಿಯಲುಬಾರದು ಕೆಟ್ಟನುಡಿಗಳ, ನಡೆಯಲುಬಾರದು ಕೆಟ್ಟನಡೆಗಳ, ನುಡಿದಡೇನು ನುಡಿಯದಿರ್ದಡೇನು? ಹಿಡಿದವ್ರತ ಬಿಡದಿರಲು ಅದೆ ಮಹಾಜ್ಞಾನದಾಚರಣೆ ಎಂಬೆನು ಅಜಗಣ್ಣ ತಂದೆ – ಮುಕ್ತಾಯಕ್ಕ ಎಂದು ವಚನವನ್ನು ಟ್ವೀಟ್ ಮಾಡಿದ್ದಾರೆ ಹೆಚ್.ಡಿ ಕುಮಾರಸ್ವಾಮಿ.









