Bangalore | ‘Quit hatred Tejasvi Surya’ ಅಭಿಯಾನಕ್ಕೆ ಚಾಲನೆ
ಬೆಂಗಳೂರು : ಸಂಸದ ತೇಜಸ್ವಿ ಸೂರ್ಯ ಅವರಿಗೆ ಒಳ್ಳೆಯ ಬುದ್ಧಿ ಬರಲಿ. ದ್ವೇಷ ಬಿಟ್ಟು ಪ್ರೇಮ ಮೂಡಲಿ. ಸಮಾಜದಲ್ಲಿ ಶಾಂತಿಯನ್ನು ಕಾಪಡುವಂತಹ ಮನೋಭಾವನೆಯನ್ನು ಬೆಳೆಸಿಕೊಳ್ಳಲಿ ಎಂದು ಪಂಚ ದುರ್ಗಾ ಪೂಜೆಯನ್ನು ಮಾಡಿದ್ದೇವು. ಅಲ್ಲದೆ ಪಂಚ ದುರ್ಗಾ ಪೂಜೆಯ ಪಂಚ ಪುಷ್ಪ ಪ್ರಸಾದವನ್ನು ಅವರಿಗೆ ಕೊರಿಯರ್ ಮೂಲಕ ಕಳುಹಿಸಲು ಮುಂದಾದಾಗ ಪೊಲೀಸರು ಅಡ್ಡಿಪಡಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಾ. ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು ಅವರು ಹೇಳಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಮತ್ತು ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಅವರು ತಮ್ಮ ಸ್ವಾರ್ಥಕ್ಕಾಗಿ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಾವು ಲೋಕ ಕಲ್ಯಾಣಾರ್ಥಕವಾಗಿ ಪೂಜೆ ಮಾಡಿ ಅವರಿಗೆ ಒಳ್ಳೆಯ ಬುದ್ದಿಯನ್ನು ದೇವರು ನೀಡಲಿ ಎಂದು ಪ್ರಸಾದ ಕಳುಹಿಸಲು ಮುಂದಾಗ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇಂತಹ ಬೆದರಿಕೆಗಳಿಗೆ ನಾವು ಜಗ್ಗಲ್ಲ. ಸಮಾಜದಲ್ಲಿ ಶಾಂತಿ ಕಾಪಾಡಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶ. ಆದ್ರೆ ಪೊಲೀಸರ ಮೂಲಕ ನಮ್ಮನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಹೆದರುವುದಿಲ್ಲ. ಅವರಿಗೆ ಭಯ ಮತ್ತು ಆತಂಕ ಮೂಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ‘Quit Hatred Tejasvi Surya’ ಅಭಿಯಾನಕ್ಕೆ ಕೆಪಿಸಿಸಿ ವಕ್ತಾರ ಡಾ.ಶಂಕರ್ ಗುಹಾ ದ್ವಾರಕಾನಾಥ ಅವರು ಚಾಲನೆ ನೀಡಿದರು. ಮಂಗಳೂರಿನಲ್ಲಿ ಸರಣಿ ಕೊಲೆಗಳ ಸಂಬಂಧ ಸಂಸದ ತೇಜಸ್ವಿ ಸೂರ್ಯ ಅವರು “ ಕಾಂಗ್ರೆಸ್ ಸರ್ಕಾರ ಇದ್ದಿದ್ದೇ ಕಲ್ಲು ಹೊಡೆಯಬಹುದಿತ್ತು” ಎಂಬ ಹೇಳಿಕೆಯನ್ನು ನೀಡಿದ್ದರು. ಇದನ್ನು ಖಂಡಿಸಿ ಹಾಗೂ ಅವರಿಗೆ ಒಳ್ಳೆಯ ಮನಸ್ಥಿತಿಯನ್ನು ದೇವರು ದಯಪಾಲಿಸಲಿ ಎಂದು ಶ್ರೀನಗರದ ಡಾ.ಶಂಕರ್ ಗುಹಾ ದ್ವಾರಕಾನಾಥ ಕಚೇರಿಯಲ್ಲಿ ಶುಭಕೃತ್ ನಾಮ ಸಂವತ್ಸರದ ಶ್ರಾವಣ ಮಾಸದಲ್ಲಿ ಶುಕ್ಲಪಕ್ಷದ ದ್ವಾದಶಿ ತಿಥಿಯಂದು ಪಂಚ ಪುಷ್ಪಗಳಲ್ಲಿ ವಿಶೇಷ ಪಂಚದುರ್ಗಾ ಮಹಾಪೂಜೆ ಸಲ್ಲಿಸಲಾಯಿತು.
ಅಲ್ಲದೇ ತೇಜಸ್ವಿ ಸೂರ್ಯ ಹಾಗೂ ಶಾಸಕ ಶ್ರೀ ರವಿಸುಬ್ರಮಣ್ಯ ಅವರಿಗೆ ಒಳ್ಳೆಯ ಮನಸ್ಥಿತಿಯನ್ನು ದೇವರು ದಯಪಾಲಿಸಲಿ ಎಂದು ಹಾಗೇ ಸಂಸದರಿಗೆ ದ್ವೇಷ, ಕ್ಲೇಶ, ದುಷ್ಟ ಬುದ್ಧಿಗಳು ದೂರವಾಗಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರಾರ್ಥಿಸಿದರು.
ಕೆಪಿಸಿಸಿ ವಕ್ತಾರರಾದ ಡಾ.ಶಂಕರ್ ಗುಹಾ ದ್ವಾರಕಾನಾಥ ನೇತೃತ್ವದಲ್ಲಿ ಈ ವಿಶೇಷ ಪೂಜೆ ನೆರವೇರಿದೆ. ಈ ಪೂಜೆಯಲ್ಲಿ ಬಸವನಗುಡಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.