ಬೆಂಗಳೂರು: ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಸರ್ಕಾರಿ ಹಾಸ್ಟೆಲ್ಗಳಲ್ಲಿ ಬಡ ಹೆಣ್ಣು ಮಕ್ಕಳ ಸುರಕ್ಷತೆ ಆತಂಕಕ್ಕೀಡಾಗಿದ್ದು, ಈ ವಿಚಾರವಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಹಿಂದ ವರ್ಗದ ಬಗ್ಗೆ ತಮಗೆ ನಿಜವಾದ ಕಾಳಜಿ ಇದ್ದರೆ, ಐಷಾರಾಮಿ ಜೀವನ ಬಿಟ್ಟು ಒಮ್ಮೆ ಸರ್ಕಾರಿ ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಎಂದು ಸವಾಲ್ ಹಾಕಿದ್ದಾರೆ.
ರಾಜ್ಯದ ವಿವಿಧೆಡೆ ಇರುವ ಸರ್ಕಾರಿ ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡ (ಎಸ್ಟಿ) ಮತ್ತು ಹಿಂದುಳಿದ ವರ್ಗಗಳ (ಒಬಿಸಿ) ಹಾಸ್ಟೆಲ್ಗಳಲ್ಲಿ ಆಶ್ರಯ ಪಡೆದಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯರು ಗರ್ಭಿಣಿಯರಾಗುತ್ತಿರುವ ಆಘಾತಕಾರಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಗಂಭೀರ ಸಮಸ್ಯೆಯನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಈ ಕುರಿತ ವರದಿಯೊಂದನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಆರ್. ಅಶೋಕ್, ಸಿದ್ದರಾಮಯ್ಯ ಅವರ ಆಡಳಿತ ವೈಖರಿಯನ್ನು ಮತ್ತು ಆದ್ಯತೆಗಳನ್ನು ಪ್ರಶ್ನಿಸಿದ್ದಾರೆ.
ಬಡ ಕುಟುಂಬದ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆಯಾಗಿರುವ ಸರ್ಕಾರಿ ಹಾಸ್ಟೆಲ್ಗಳು ಇಂದು ಸುರಕ್ಷಿತವಾಗಿಲ್ಲ ಎಂಬುದು ಆತಂಕಕಾರಿ ಸಂಗತಿಯಾಗಿದೆ. ಅಪ್ರಾಪ್ತ ಬಾಲಕಿಯರು ಗರ್ಭಿಣಿ ಆಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದು ಸಮಾಜ ತಲೆ ತಗ್ಗಿಸುವ ವಿಷಯ. ಇದನ್ನು ಕೇವಲ ಸಾಮಾನ್ಯ ಘಟನೆಗಳಂತೆ ನೋಡದೆ, ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಮತ್ತು ಈ ಪಿಡುಗನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.
ಹೈಕಮಾಂಡ್ ಮೆಚ್ಚಿಸಲು ಹೋಮ್ ಟೂರ್ ಸಾಕು
ಮುಖ್ಯಮಂತ್ರಿಗಳ ನಡೆವಳಿಕೆಯನ್ನು ಟೀಕಿಸಿರುವ ಅಶೋಕ್, ಸಿದ್ದರಾಮಯ್ಯ ಅವರಿಗೆ ನಿಜವಾಗಿಯೂ ದಲಿತರು, ಹಿಂದುಳಿದ ವರ್ಗಗಳು ಮತ್ತು ಬಡವರ ಮನೆಯ ಹೆಣ್ಣುಮಕ್ಕಳ ಮೇಲೆ ಕಾಳಜಿ ಇದ್ದರೆ ಮೊದಲು ಹಾಸ್ಟೆಲ್ಗಳತ್ತ ಗಮನ ಹರಿಸಲಿ ಎಂದು ಹೇಳಿದ್ದಾರೆ. ಹೈಕಮಾಂಡ್ ಮೆಚ್ಚಿಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮನೆಗೆ ಹೋಮ್ ಟೂರ್ ಮಾಡುವ ಬದಲು, ಅವ್ಯವಸ್ಥೆಯ ಆಗರವಾಗಿರುವ ಸರ್ಕಾರಿ ಹಾಸ್ಟೆಲ್ ಟೂರ್ ಮಾಡಿ ಅಲ್ಲಿನ ನೈಜ ಸ್ಥಿತಿಯನ್ನು ಕಣ್ಣಾರೆ ಕಾಣಲಿ ಎಂದು ವ್ಯಂಗ್ಯವಾಡಿದ್ದಾರೆ.
ನಾಟಿಕೋಳಿ ಬಿಡಿ, ಹಾಸ್ಟೆಲ್ ಊಟ ಮಾಡಿ
ಶ್ರೀಮಂತರ ಮನೆಯಲ್ಲಿ ತಯಾರಾಗುವ ರುಚಿಯಾದ ನಾಟಿಕೋಳಿ ಅಡುಗೆಯನ್ನು ಮಾಡಿಸಿಕೊಂಡು ತಿನ್ನುವ ಬದಲು, ಒಮ್ಮೆಯಾದರೂ ಸರ್ಕಾರಿ ಹಾಸ್ಟೆಲ್ ಗಳಿಗೆ ಭೇಟಿ ನೀಡಿ, ಅಲ್ಲಿನ ಬಡ ಮಕ್ಕಳಿಗೆ ಉಣಬಡಿಸುವ ಊಟವನ್ನು ತಿಂದು ನೋಡಿ. ಅಲ್ಲಿನ ರುಚಿ ಮತ್ತು ಶುಚಿ ಎಷ್ಟರಮಟ್ಟಿಗೆ ಇದೆ ಎಂಬುದು ತಮಗೆ ಅರ್ಥವಾಗುತ್ತದೆ ಎಂದು ಮುಖ್ಯಮಂತ್ರಿಗಳಿಗೆ ಅಶೋಕ್ ನೇರ ಸವಾಲು ಹಾಕಿದ್ದಾರೆ.
ಅಹಿಂದ ಕೊಡುಗೆ ಶೂನ್ಯವೇ?
ಅಹಿಂದ ನಾಯಕ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯನವರು, ಅಹಿಂದ ಹೆಸರಿನಲ್ಲಿ ದಲಿತರು ಮತ್ತು ಹಿಂದುಳಿದವರ ವೋಟು ಗಿಟ್ಟಿಸಿಕೊಂಡು ಅಧಿಕಾರ ಅನುಭವಿಸಿದ್ದು ಬಿಟ್ಟರೆ, ಆ ಸಮುದಾಯಗಳಿಗೆ ನೀವು ನೀಡಿದ ಶಾಶ್ವತ ಕೊಡುಗೆಯಾದರೂ ಏನು? ಅವರ ಜೀವನ ಮಟ್ಟ ಸುಧಾರಿಸುವಲ್ಲಿ ಅಥವಾ ಅವರ ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸುವಲ್ಲಿ ನಿಮ್ಮ ಸರ್ಕಾರ ವಿಫಲವಾಗಿದೆಯೇ ಎಂದು ಪ್ರತಿಪಕ್ಷ ನಾಯಕರು ಪ್ರಶ್ನಿಸಿದ್ದಾರೆ.
ರಾಜ್ಯದ ಸರ್ಕಾರಿ ಹಾಸ್ಟೆಲ್ಗಳಲ್ಲಿನ ಅವ್ಯವಸ್ಥೆ ಮತ್ತು ಬಾಲಕಿಯರ ಸುರಕ್ಷತೆಯ ವಿಚಾರ ಈಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಸರ್ಕಾರ ಈ ಬಗ್ಗೆ ಯಾವ ರೀತಿಯ ಕಠಿಣ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.








