ಬಿಎಸ್ ವೈ ಮನಸ್ಸಿಗೆ ನೋವಾದಂತೆ ಕಾಣುತ್ತಿದೆ : ಆರ್.ಅಶೋಕ್
ಬೆಂಗಳೂರು : ಹೈಕಮಾಂಡ್ ಹೇಳಿದ್ರೆ ರಾಜೀನಾಮೆ ಕೊಡಲು ಸಿದ್ಧ ಎಂಬ ಸಿಎಂ ಬಿಎಸ್ ವೈ ಹೇಳಿಕೆ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಠಿಸಿದೆ.
ಈ ಮಧ್ಯೆ ಈ ಬಗ್ಗೆ ಸಚಿವ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಮನಸ್ಸಿಗೆ ನೋವು ಆದಂತೆ ಕಾಣುತ್ತಿದೆ. ಹೀಗಾಗಿ, ಅವರು ಹೈಕಮಾಂಡ್ ಹೇಳಿದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿರಬಹುದು ಎಂದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಇಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್, ಸಿ.ಟಿ. ರವಿ ಸೇರಿದಂತೆ ಇನ್ನೂ ಹಲವು ನಾಯಕರು ಯಾವುದೇ ಕಾರಣಕ್ಕೆ ನಾಯಕತ್ವದ ಬದಲಾವಣೆ ಇಲ್ಲ ಎಂದು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ.
ರಾಜ್ಯದಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ವಿದ್ಯಮಾನ, ದೆಹಲಿಗೆ ಪ್ರಯಾಣ, ನಾಯಕತ್ವದ ಪ್ರಶ್ನೆಯ ವಿಷಯ ಬಿಂಬಿತ ಆಗಿರುವುದನ್ನು ನೋಡಿ ಮುಖ್ಯಮಂತ್ರಿ ಮನಸ್ಸಿಗೆ ನೋವು ಆದಂತೆ ಕಾಣುತ್ತಿದೆ. ಹೀಗಾಗಿ ಸಿಎಂ ರಾಜೀನಾಮೆ ಹೇಳಿಕೆ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವಂತೆ ಮಾತನಾಡಿದ ಆರ್.ಅಶೋಕ್, ನೀವೆಲ್ಲ ಬಿಂಬಿಸುವ ಸಚಿವ ಸಿ.ಪಿ. ಯೋಗೇಶ್ವರ ಕೂಡಾ ಯಡಿಯೂರಪ್ಪ ಅವರೇ ನಮ್ಮ ನಾಯಕರು. ನಮ್ಮ ಮುಖ್ಯಮಂತ್ರಿ ಎಂದಿದ್ದಾರೆ.
ಯಡಿಯೂರಪ್ಪ ಅವರು ಅವಧಿ ಪೂರ್ಣಗೊಳಿಸುವ ಪೂರ್ತಿ ವಿಶ್ವಾಸವಿದೆ. ಅವರ ನಾಯಕತ್ವದಲ್ಲಿ ಅಚಲ ವಿಶ್ವಾಸ ಇದೆ. ಕೇಂದ್ರದ ನಾಯಕರ ಆಶೀರ್ವಾದ ಅವರ ಮೇಲಿದೆ. ರಾಜ್ಯ ಘಟಕದ ಅಧ್ಯಕ್ಷ ಸಹಕಾರವೂ ಅವರಿಗಿದೆ ಎಂದು ಹೇಳಿದರು.