ಬೆಂಗಳೂರು: ರಾಜ್ಯದ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರನ್ನು ಆ ಸ್ಥಾನದಿಂದ ಕೆಳಗಿಳಿಸದಿದ್ದರೆ ಬಿಜೆಪಿ ಶಾಶ್ವತವಾಗಿ ವಿರೋಧ ಪಕ್ಷದ ಸ್ಥಾನದಲ್ಲೇ ಇರಬೇಕಾಗುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ 63% ಕಮಿಷನ್ ಆರೋಪ ಮಾಡಿದ ಆರ್. ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಅಶೋಕ್ ಅವರ ಅಜ್ಞಾನ ಮತ್ತು ಬೇಜವಾಬ್ದಾರಿತನವನ್ನು ಕಟುವಾದ ಶಬ್ದಗಳಲ್ಲಿ ಟೀಕಿಸಿದರು.
ಉಪ ಲೋಕಾಯುಕ್ತರು ನೀಡಿದ್ದ ವರದಿ 2019ರ ಆಗಸ್ಟ್ ತಿಂಗಳಿಗೆ ಸೇರಿದ್ದು. ಆಗ ರಾಜ್ಯದಲ್ಲಿ ಆಡಳಿತದಲ್ಲಿದ್ದದ್ದು ಬಿಜೆಪಿ ಸರ್ಕಾರ. ಆದರೆ, ಆ ವರದಿಯನ್ನು ಹಿಡಿದುಕೊಂಡು ಈಗಿನ ಕಾಂಗ್ರೆಸ್ ಸರ್ಕಾರದ ಮೇಲೆ ಗೂಬೆ ಕೂರಿಸಲು ಹೋಗಿ ಅಶೋಕ್ ಅವರು ನಗೆಪಾಟಲಿಗೆ ಈಡಾಗಿದ್ದಾರೆ ಎಂದು ಎಂಬಿ ಪಾಟೀಲ್ ವ್ಯಂಗ್ಯವಾಡಿದರು.
ಸ್ವತಃ ಬಿಜೆಪಿ ಕಾಲದ ವರದಿಯನ್ನು ಪ್ರಸ್ತಾಪಿಸಿ, ಕಾಂಗ್ರೆಸ್ ವಿರುದ್ಧ ಮಾತನಾಡುತ್ತಿರುವ ವಿಪಕ್ಷ ನಾಯಕರ ನಡೆ ಅಚ್ಚರಿ ಮೂಡಿಸಿದೆ. ಮಾಹಿತಿಯನ್ನು ಪರಿಶೀಲಿಸದೆ, ಚೆಕ್ ಮಾಡದೆ ಮಾತನಾಡುವುದು ವಿಪಕ್ಷ ನಾಯಕನ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಅವರು ಕಿಡಿಕಾರಿದರು.
ಶ್ಯಾಡೋ ಸಿಎಂಗೆ ಕನಿಷ್ಠ ಜ್ಞಾನವಿರಲಿ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ನಾಯಕನನ್ನು ಶ್ಯಾಡೋ ಸಿಎಂ (ನೆರಳು ಮುಖ್ಯಮಂತ್ರಿ) ಎಂದು ಕರೆಯಲಾಗುತ್ತದೆ. ಅಂತಹ ಮಹತ್ವದ ಸ್ಥಾನದಲ್ಲಿರುವವರು ಅತ್ಯಂತ ಜವಾಬ್ದಾರಿಯಿಂದ ವರ್ತಿಸಬೇಕು. ಆದರೆ ಅಶೋಕ್ ಅವರು 2019ರ ತಮ್ಮದೇ ಸರ್ಕಾರದ ಅವಧಿಯ ವರದಿಯನ್ನು ಈಗಿನ ಸರ್ಕಾರದ ವಿರುದ್ಧ ಬಳಸುವ ಮೂಲಕ ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ ಎಂದು ಸಚಿವರು ಟೀಕಿಸಿದರು.
ಇದೇ ವೇಳೆ ಬಿಜೆಪಿಗೆ ಉಚಿತ ಸಲಹೆ ನೀಡಿದ ಎಂಬಿ ಪಾಟೀಲ್, ಆರ್ ಅಶೋಕ್ ಅಂತಹವರನ್ನು ವಿಪಕ್ಷ ನಾಯಕರಾಗಿ ಮುಂದುವರೆಸಿದರೆ, ಸೂರ್ಯ ಚಂದ್ರ ಇರುವವರೆಗೂ ಮತ್ತು ತಲೆತಲಾಂತರದವರೆಗೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಶಾಶ್ವತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿಯೇ ಕೂರಬೇಕಾಗುತ್ತದೆ ಎಂದು ಭವಿಷ್ಯ ನುಡಿದರು.
ಬಿಜೆಪಿ ತನ್ನ ಹಿತದೃಷ್ಟಿಯಿಂದ ಎಷ್ಟು ಬೇಗ ವಿರೋಧ ಪಕ್ಷದ ನಾಯಕನನ್ನು ಬದಲಾವಣೆ ಮಾಡುತ್ತದೆಯೋ ಅಷ್ಟು ಒಳ್ಳೆಯದು. ಇಲ್ಲದಿದ್ದರೆ ಶಾಶ್ವತ ವಿಪಕ್ಷ ಸ್ಥಾನ ಗ್ಯಾರಂಟಿ ಎಂದು ಪಾಟೀಲ್ ಲೇವಡಿ ಮಾಡಿದರು.








