ಬೆಂಗಳೂರು: ಮೊಸರಿನ ಪ್ರತಿ ಲೀಟರ್‌ಗೆ ₹14 ಬೆಲೆ ಹೆಚ್ಚಳ ಮಾಡಿ, ಜನರಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಅಲ್ಪ ಪ್ರಮಾಣದಲ್ಲಿ ದರ ಇಳಿಸುವುದಾಗಿ ಹೇಳುವುದು ಯಾವ ರೀತಿಯ ಜನಪರ ಆಡಳಿತ? ಮೊದಲು ವಿಪರೀತವಾಗಿ ಬೆಲೆ ಏರಿಸಿ, ಬಳಿಕ ಅಲ್ಪ ಪ್ರಮಾಣದಲ್ಲಿ ಇಳಿಕೆ ಮಾಡುವ ಮೂಲಕ ಜನರ ಆಕ್ರೋಶಕ್ಕೆ ತೇಪೆ ಹಚ್ಚುವ ಪ್ರಯತ್ನ ಮಾಡಬೇಡಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಾಲು ಮತ್ತು ಮೊಸರಿನ ದರ ಏರಿಕೆಯಿಂದ ಈಗಾಗಲೇ ಸಾಮಾನ್ಯ ಕುಟುಂಬಗಳ ಮಾಸಿಕ ಬಜೆಟ್ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಮತ್ತಷ್ಟು ಆರ್ಥಿಕ ಹೊರೆ ಹೇರುವುದು ಜವಾಬ್ದಾರಿಯುತ ಆಡಳಿತದ ಲಕ್ಷಣವಲ್ಲ ಎಂದು ಅವರು ಟೀಕಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ರೈತರ ಹಿತ ಕಾಪಾಡುವುದು ಸರ್ಕಾರದ ಕರ್ತವ್ಯ. ಹಾಲು ಉತ್ಪಾದಕರಿಗೆ ಸೂಕ್ತ ಪ್ರೋತ್ಸಾಹಧನ ನೀಡುವ ಮೂಲಕ ಅವರ ಆರ್ಥಿಕ ಸ್ಥಿತಿಯನ್ನು ಬಲಪಡಿಸಬೇಕು. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ಪ್ರೋತ್ಸಾಹಧನ ನೀಡುವ ಮೂಲಕ ರೈತರ ಹಿತ ಕಾಪಾಡಲಾಗಿತ್ತು. ಅದರ ಹೊರೆಯನ್ನು ನೇರವಾಗಿ ಗ್ರಾಹಕರ ಮೇಲೆ ವರ್ಗಾಯಿಸದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿತ್ತು. ರೈತರಿಗೆ ನೆರವು ನೀಡುವ ನೆಪದಲ್ಲಿ ಜನರ ಜೇಬಿಗೆ ಕತ್ತರಿ ಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರಕ್ಕೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದರೆ, ಅಗತ್ಯವಿರುವ ಪ್ರೋತ್ಸಾಹಧನವನ್ನು ಸರ್ಕಾರವೇ ಭರಿಸಲಿ. ರೈತರಿಗೆ ನೆರವು ನೀಡುವ ಜವಾಬ್ದಾರಿಯಿಂದ ನುಣುಚಿಕೊಂಡು ಅದರ ಹೊಣೆಯನ್ನು ಸಾಮಾನ್ಯ ಜನರ ಮೇಲೆ ಹಾಕುವುದು ಯಾವ ನ್ಯಾಯ? ಎಂದು ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ನೀರಿನ ಬಾಟಲಿ ಬೆಲೆ ಏರಿಕೆಯಾದರೆ ಯಾರೂ ಪ್ರಶ್ನಿಸುವುದಿಲ್ಲ ಎಂದು ಹೇಳುವ ಮುಖ್ಯಮಂತ್ರಿಗಳು, ಜನರ ದಿನನಿತ್ಯದ ಅಗತ್ಯವಾದ ಹಾಲು ಮತ್ತು ಮೊಸರಿನ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುವುದು ಹಾಸ್ಯಾಸ್ಪದ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊಸರಿನ ದರದಲ್ಲಿ ಅಲ್ಪ ಇಳಿಕೆ ಮಾಡಿದರೆ ಸಾಲದು. ಹಾಲಿನ ದರ ಏರಿಕೆಯನ್ನೂ ಮರುಪರಿಶೀಲಿಸಿ, ಹಾಲು ಮತ್ತು ಮೊಸರಿನ ಬೆಲೆಯನ್ನು ಇಳಿಸಬೇಕು. ರೈತರಿಗೆ ಸರ್ಕಾರವೇ ಸೂಕ್ತ ಪ್ರೋತ್ಸಾಹಧನ ನೀಡಬೇಕು. ಜನರ ಜೇಬಿಗೆ ಹೊರೆ ಹಾಕುವುದಲ್ಲ ಸರ್ಕಾರದ ಜವಾಬ್ದಾರಿ; ಜನರ ಬದುಕಿಗೆ ನೆಮ್ಮದಿ ನೀಡುವುದೇ ನಿಜವಾದ ಜನಪರ ಆಡಳಿತ ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ.







