ಕುಂಬ್ಳೆ… ಕಪಿಲ್ ದೇವ್.. ಬಳಿಕ ಅಶ್ವಿನ್ ಗೆ ಸ್ಥಾನ
ಕಾನ್ಪುರ : ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಬೇಟೆ ಮುಂದುವರೆಸಿರುವ ಅಶ್ವಿನ್, ಇದೀಗ ಭಾರತದ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
ಮೊದಲ ಟೆಸ್ಟ್ ಪಂದ್ಯದ ಕೊನೆಯ ಇನ್ನಿಂಗ್ಸ್ ನಲ್ಲಿ ಅಶ್ವಿನ್ ಮೂರು ವಿಕೆಟ್ ಪಡೆಯುವ ಮೂಲಕ ಭಾರತದ ಪರ ಹೆಚ್ಚು ವಿಕೆಟ್ ಪಡೆದ 3ನೇ ಬೌಲರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಹರ್ಭಜನ್ ಸಿಂಗ್ ಅವರನ್ನು ಹಿಂದಿಕ್ಕಿದ್ದಾರೆ.
ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನವಾದ ಇಂದು ಅಶ್ವಿನ್, ನ್ಯೂಜಿಲ್ಯಾಂಡ್ ತಂಡದ ಆರಂಭಿಕ ಬ್ಯಾಟರ್ ಟಾಮ್ ಲೇಥಮ್ ವಿಕೆಟ್ ಪಡೆಯುವ ಮೂಲಕ ಹರ್ಭಜನ್ ಸಿಂಗ್ ಅವರನ್ನು ಹಿಂದಿಕ್ಕಿದರು.
80ನೇ ಟೆಸ್ಟ್ ಪಂದ್ಯವಾಡುತ್ತಿರುವ ಅಶ್ವಿನ್ ಈವರೆಗೂ 418 ವಿಕೆಟ್ ಗಳನ್ನು ಪಡೆದಿದ್ದಾರೆ.
ಹರ್ಭಜನ್ ಸಿಂಗ್ 103 ಟೆಸ್ಟ್ ಪಂದ್ಯಗಳಿಂದ 417 ವಿಕೆಟ್ ಪಡೆದಿದ್ದಾರೆ.
ಭಾರತದ ಪರ ಟೆಸ್ಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ 619 ವಿಕೆಟ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.
2ನೇ ಸ್ಥಾನದಲ್ಲಿ ಲೆಜೆಂಡರಿ ಆಲ್ ರೌಂಡರ್ ಕಪಿಲ್ ದೇವ್ ಇದ್ದಾರೆ. ಕಪಿಲ್ ದೇವ್ ಟೆಸ್ಟ್ ಕ್ರಿಕೆಟ್ ನಲ್ಲಿ 434 ವಿಕೆಟ್ ಪಡೆದಿದ್ದಾರೆ.