ಮಂಡ್ಯ : ಕೊರೊನಾ ಕಾಟದ ನಡುವೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ವಿಧಾನ ಪರಿಷತ್ ಚುನಾವಣೆ ವಿಚಾರವಾಗಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಬಿಜೆಪಿಯಲ್ಲಿ ಎಂಎಲ್ ಸಿ ಸ್ಥಾನಕ್ಕಾಗಿ ಭಾರಿ ಪೈಪೋಟಿ ಏರ್ಪಟ್ಟಿದ್ದು, ತೆರೆಮರೆಯಲ್ಲಿ ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದಾರೆ. ಇದರ ಮಧ್ಯೆ ವಿಧಾನ ಪರಿಷತ್ ಚುನಾವಣೆಯಲ್ಲಿ ಮಾಜಿ ಸಚಿವ ಆರ್ ಶಂಕರ್ ಗೆ ಟಿಕೆಟ್ ಬಹುತೇಕ ಖಚಿತವಾಗಿದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್ ಶಂಕರ್ ಉಪ ಚುಣಾವಣೆಗೆ ನಿಂತಿರಲಿಲ್ಲ. ಹಾಗಾಗಿ ಅವರಿಗೆ ಬಹುತೇಕ ಟಿಕೆಟ್ ಖಚಿತವಾಗಿದೆ. ಉಳಿದ ಮೂರು ಸ್ಥಾನಕ್ಕಾಗಿ ಎಂಟಿಬಿ ನಾಗರಾಜ್, ಹೆಚ್ ವಿಶ್ವನಾಥ್ ಹಾಗೂ ಸಿ ಪಿ ಯೋಗೇಶ್ವರ್ ಸೇರಿ ಹಲವರು ಆಕ್ಷಾಂಕ್ಷಿಗಳಿದ್ದಾರೆ. ಪಕ್ಷದ ನಾಯಕರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಸಿ.ಪಿ.ಯೋಗೇಶ್ವರ್ ಪಕ್ಷ ಬಿಡಲು ನಿರ್ಧರಿಸಿದ್ದಾರೆ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ಖಂಡಿತ ಯೋಗೇಶ್ವರ್ ಅವರು ಮುನಿಸಿಕೊಂಡಿಲ್ಲ. ಅವರು ಚನ್ನಪಟ್ಟಣದಲ್ಲಿ ಚುನಾವಣೆ ಕಳೆದುಕೊಂಡರೂ ಸಹ ಪಕ್ಷದ ಎಲ್ಲಾ ಚಟುವಟಿಕೆಯಲ್ಲಿ ಭಾಗವಹಿಸಿ ಚುನಾವಣೆ ಕೆಲಸಗಳನ್ನು ಸಕ್ರಿಯವಾಗಿ ಮಾಡಿದ್ದಾರೆ. ಪಕ್ಷ ಅವರ ಕೋರಿಕೆ ಈಡೇರಿಸುವ ಚಿಂತನೆಯಲ್ಲಿದೆ ಎಂದರು.
ಇದೇ ವೇಳೆ ರಾಜ್ಯಸಭೆಯಲ್ಲಿ ದೇವೇಗೌಡರಿಗೆ ಬಿಜೆಪಿ ಬೆಂಬಲ ವಿಚಾರವಾಗಿ ಮಾತನಾಡಿ, ಅವರಿಗೆ ನಾವು ಬೆಂಬಲಿಸುವ ಪ್ರಮೇಯವೇ ಉದ್ಭವವಾಗಲ್ಲ. ಅವರು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಹಾಗೂ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿಯೂ ಇದ್ದಾರೆ. ಹಾಗಾಗಿ ಅವರಿಗೆ ನಮ್ಮ ಮತದ ಅವಶ್ಯಕತೆಯೂ ಇಲ್ಲ ಎಂದರು.








