ರಚಿನ್ ರವೀಂದ್ರ… ನ್ಯೂಜಿಲೆಂಡ್ ತಂಡದಲ್ಲಿರುವ ನಮ್ಮ ಬೆಂಗಳೂರಿನ ಕನ್ನಡಿಗ ಕ್ರಿಕೆಟಿಗ…
ಹೌದು, ಸದ್ಯ ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ಸದ್ದು ಮಾಡುತ್ತಿರುವ ಭಾರತೀಯ ಕ್ರಿಕೆಟಿಗ ರಚಿನ್ ರವೀಂದ್ರ. 21ರ ಹರೆಯದ ರಚಿನ್ ರವೀಂದ್ರ ಅವರು ನ್ಯೂಜಿಲೆಂಡ್ ದೇಸಿ ಕ್ರಿಕೆಟ್ ನಲ್ಲಿ ಅದ್ಭುತವಾದ ಪ್ರದರ್ಶನವನ್ನು ನೀಡಿದ್ದಾರೆ. ಅಲ್ಲದೆ ಇದೀಗ ಇಂಗ್ಲೆಂಡ್ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಗೂ ಆಯ್ಕೆಯಾಗಿದ್ದಾರೆ. ಟೀಮ್ ಇಂಡಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯಕ್ಕೂ ರಚಿನ್ ರವೀಂದ್ರ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಭುಜನೋವಿನಿಂದಾಗಿ ರಚಿನ್ ರವೀಂದ್ರ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಎಂಟ್ರಿ ಸ್ವಲ್ಪ ತಡವಾಗುತ್ತಿದೆ.
ಅಂದ ಹಾಗೇ ರಚಿನ್ ರವೀಂದ್ರ ಅವರಿಗೆ ಬೆಂಗಳೂರಿನ ನಂಟಿದೆ. ಬಿಡುವು ಸಿಕ್ಕಾಗ ತವರು ನೆಲ ಬೆಂಗಳೂರಿಗೆ ಆಗಾಗ ಬಂದು ಹೋಗುತ್ತಿರುತ್ತಾರೆ. ನ್ಯೂಜಿಲೆಂಡ್ ನಲ್ಲಿಹುಟ್ಟಿ ಬೆಳೆದ್ರೂ ಭಾರತದ ನಂಟನ್ನು ಮಾತ್ರ ಬಿಟ್ಟಿಲ್ಲ.
1990ರಲ್ಲಿ ರಚಿನ್ ರವೀಂದ್ರ ತಂದೆ ರವಿ ಕೃಷ್ಣಮೂರ್ತಿ. ಬೆಂಗಳೂರಿನವರು. ಸಾಫ್ಟವೇರ್ ಸಿಸ್ಟವ್ ಆರ್ಕಿಟೆಕ್ಚರ್ ಆಗಿರುವ ರವಿ ಕೃಷ್ಣಮೂರ್ತಿ 1990ರಲ್ಲಿ ನ್ಯೂಜಿಲೆಂಡ್ ನ ವೆಲ್ಲಿಂಗ್ಟನ್ ಗೆ ನೆಲೆಸಿದ್ದರು. ರವಿಕೃಷ್ಣ ಮೂರ್ತಿ ಅವರ ಪತ್ನಿ ದೀಪಾ ಕೃಷ್ಣಮೂರ್ತಿ.
ಅಂದ ಹಾಗೇ ರಚಿನ್ ರವೀಂದ್ರ ಹುಟ್ಟಿದ್ದು 1999 ನವೆಂಬರ್ 18ರಂದು. ತನ್ನ ಐದನೇ ಹರೆಯದಲ್ಲೇ ಪ್ಲಾಸ್ಟಿಕ್ ಬ್ಯಾಟ್ ನಲ್ಲಿ ಕ್ರಿಕೆಟ್ ಆಡಲು ಶುರು ಮಾಡಿದ್ದ ರಚಿನ್ ತನ್ನ ಹನ್ನೊಂದರ ಹರೆಯದಲ್ಲಿ ನ್ಯೂಜಿಲೆಂಡ್ ನ ಹಟ್ ಹ್ವಾಕ್ಸ್ ಕ್ಲಬ್ ನಲ್ಲಿ ತರಬೇತಿ ಪಡೆಯಲು ಶುರು ಮಾಡಿದ್ರು.
ಪ್ರತಿ ವರ್ಷ ಬೇಸಿಗೆ ರಜೆಯಲ್ಲಿ ತವರಿಗೆ ಬರುತ್ತಿದ್ದಾಗ ರಚಿನ್ ರವೀಂದ್ರ ಅವರು ಅನಂತರಪುರ ಮತ್ತು ಆಂಧ್ರಪ್ರದೇಶದಲ್ಲಿ ಕ್ರಿಕೆಟ್ ಆಡುತ್ತಿದ್ದರು.
ಹಾಗೇ ರಚಿನ್ ರವೀಂದ್ರ ಅವರು ಬೆಂಗಳೂರಿಗೆ ಬರುತ್ತಿದ್ದರು. ಬೆಂಗಳೂರಿಗೆ ಬರುತ್ತಿದ್ದಾಗ ರಚಿನ್ ಅವರು ಜಾವಗಲ್ ಶ್ರೀನಾಥ್ ಅವರಿಂದ ಕ್ರಿಕೆಟ್ ಸಲಹೆ, ಮಾರ್ಗದರ್ಶನಗಳನ್ನು ಪಡೆಯುತ್ತಿದ್ದರು.
ಅಂದ ಹಾಗೇ ಜಾವಗಲ್ ಶ್ರೀನಾಥ್ ಮತ್ತು ರಚಿನ್ ಅವರ ತಂದೆ ರವಿ ಕೃಷ್ಣಮೂರ್ತಿ ಗೆಳೆಯರಾಗಿದ್ದರು. ಅಲ್ಲದೆ ಬೆಂಗಳೂರಿನಲ್ಲಿ ಜೊತೆಯಾಗಿ ಕ್ರಿಕೆಟ್ ಕೂಡ ಆಡುತ್ತಿದ್ದರು. ಹೀಗಾಗಿ ರಚಿನ್ ರವೀಂದ್ರ ಅವರು ಜಾವಗಲ್ ಶ್ರೀನಾಥ್ ಅವರನ್ನು ಶ್ರೀ ಅಂಕಲ್ ಅಂತನೇ ಕರೆಯುವುದು.
ಇನ್ನು ಭಾರತದ ದಂತಕತೆಗಳಾದ ಸಚಿನ್ ತೆಂಡುಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರ ಆಟದಿಂದ ಸ್ಪೂರ್ತಿ ಪಡೆದಿರುವ ರಚಿನ್ ರವೀಂದ್ರ ಅವರು ನ್ಯೂಜಿಲೆಂಡ್ ದೇಶಿ ಕ್ರಿಕೆಟ್ ನ ವಿವಿಧ ವಯೋಮಿತಿ ಟೂರ್ನಿಯಲ್ಲಿ ರನ್ ಗಳ ಸುರಿಮಳೆಗೈದಿದ್ದರು.
ತನ್ನ 16ರ ಹರೆಯದಲ್ಲೇ ನ್ಯೂಜಿಲೆಂಡ್ 19 ವಯೋಮಿತಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. 2016ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಟೂರ್ನಿಯಲ್ಲಿ ಭಾಗಿಯಾಗಿದ್ದ ರಚಿನ್, 2018ರ 19ವಯೋಮಿತಿ ವಿಶ್ವಕಪ್ ಟೂರ್ನಿಯನ್ನು ಕೂಡ ಆಡಿದ್ದರು.
ಎರಡು ವರ್ಷಗಳ ಹಿಂದೆ ನ್ಯೂಜಿಲೆಂಡ್ ಪ್ರಥಮ ದರ್ಜೆಯ ಪಂದ್ಯವನ್ನಾಡಿರುವ ರಚಿನ್ ಇಲ್ಲಿಯ ತನಕ 26 ಪಂದ್ಯಗಳನ್ನು ಆಡಿದ್ದಾರೆ. ಇದ್ರಲ್ಲಿ ಮೂರು ಶತಕ ಹಾಗೂ 9 ಅರ್ಧಶತಕಗಳ ಸಹಾಯದಿಂದ 1470 ರನ್ ದಾಖಲಿಸಿದ್ದಾರೆ.
ಇನ್ನು ಬೌಲಿಂಗ್ ನಲ್ಲೂ ಕರಾಮತ್ತು ನಡೆಸುವ ರಚಿನ್ ಅವರು ಸ್ಪಿನ್ ಬೌಲರ್. ಹೀಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಗಮನ ಸೆಳೆದಿರುವ ರಚಿನ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ಹಾಗಂತ ನ್ಯೂಜಿಲೆಂಡ್ ತಂಡದಲ್ಲಿ ಭಾರತೀಯ ಮೂಲದ ಆಟಗಾರರು ಆಡುತ್ತಿರುವುದು ಇದೇನೂ ಹೊಸತಲ್ಲ. ದೀಪಕ್ ಪಟೇಲ್ ನಿಂದ ಇಶಾ ಸೋಧಿ ತನಕ ಆರು ಮಂದಿ ಆಡಿದ್ದಾರೆ .ಇದಕ್ಕೆ ಈಗ ಹೊಸ ಸೇರ್ಪಡೆ ರಚಿನ್ ರವೀಂದ್ರ. ಅಂದ ಹಾಗೇ ಈತ ರಚಿನ್.. ಸಚಿನ್ ಅಲ್ಲ. ಯಾಕಂದ್ರೆ ಸಚಿನ್ ಒಬ್ಬನೇ ಇರೋದು ಅಂತ ರಚಿನ್ ಅವರ ತಂದೆ ರವಿ ಕೃಷ್ಣಮೂರ್ತಿ ಹೇಳ್ತಾರೆ.