ಬೆಂಗಳೂರು : ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟಿನ ಬಗ್ಗೆ ನಟಿ ರಚಿತಾ ರಾಮ್ ಪ್ರತಿಕ್ರಿಯೆ ನೀಡಿದ್ದು, ನಾನು ಡ್ರಗ್ಸ್ ಸೇವನೆ ಮಾಡಲ್ಲ, ಮಾಡುವವರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ರಚಿತಾ ರಾಮ್ ನಟಿಸಲಿರುವ ‘ಕಸ್ತೂರಿ ನಿವಾಸ’ ಸಿನಿಮಾದ ಮುಹೂರ್ತ ಇಂದು ನೆರವೇರಿತು. ಇದರಲ್ಲಿ ಭಾಗಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತ ಡ್ರಗ್ಸ್ ಮಾಫಿಯಾ ಬಗ್ಗೆ ರಚಿತಾ ರಾಮ್ ಪ್ರತಿಕ್ರಿಯಿಸಿ, ಇದರ ಬಗ್ಗೆ ನನಗೇನು ಗೊತ್ತಿಲ್ಲ. ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಸುದ್ದಿಯ ಬಗ್ಗೆ ನನಗೆ ಅರಿವಿಲ್ಲ. ಅದು ಇಂಡಸ್ಟ್ರಿಯಲ್ಲಿ ಇದ್ದರೂ ಅದಕ್ಕೆ ನಾನು ತಲೆಕೆಡಿಸಿಕೊಳ್ಳಲ್ಲ. ಅವರವರ ಜೀವನ ಅವರ ಇಷ್ಟ. ಅವರ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂದುಕೊಂಡಿರುತ್ತಾರೋ ಹಾಗೆ ಇರುತ್ತಾರೆ. ಇಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಇದೆ. ಹೀಗಾಗಿ ಅವರ ಜೀವನವನ್ನು ಅವರೇ ನೋಡಿಕೊಳ್ಳಬೇಕು. ಅವರು ಬಿದ್ದರೆ ಅವರೇ ಎದ್ದೇಳಬೇಕು. ನಾವು ಚೆನ್ನಾಗಿದ್ದಾಗ ಮಾತ್ರ ಎಲ್ಲರೂ ನಮ್ಮೊಟ್ಟಿಗೆ ಇರುತ್ತಾರೆ. ಆದರೆ ನಾವು ಚೆನ್ನಾಗಿಲ್ಲ ಎಂದರೆ ನಮ್ಮನ್ನು ಬಿಟ್ಟು ಹೋಗುತ್ತಾರೆ. ಆಗ ನಾವು ಏಕಾಂಗಿ ಎಂದು ಗೊತ್ತಾಗುತ್ತದೆ. ಹೀಗಾಗಿ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು ಎಂದರು.
ಮುಂದುವರಿದು ಮಾತನಾಡುತ್ತ, ನಾನು ಡ್ರಗ್ಸ್ ಸೇವನೆ ಮಾಡಲ್ಲ ಮಾಡುವವರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಪುನರುಚ್ಚರಿಸಿದ ರಚಿತಾ, ನಮ್ಮ ಆರೋಗ್ಯ, ಕುಟುಂಬ ಮತ್ತು ಜೀವನವನ್ನು ನಾವೇ ನೋಡಿಕೊಳ್ಳಬೇಕು. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಜೋಪಾನ. ಮಾದಕ ವಸ್ತುಗಳು ಬಳಸಿ ಆರೋಗ್ಯ ಹಾಳು ಮಾಡಿ ಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡರು.