ಬೆಂಗಳೂರು: ಸಿಸಿಬಿ ಪೊಲೀಸರ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ರಂಪಾಟ ನಡೆಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಸಿಸಿಬಿ ಕಸ್ಟಡಿಯಲ್ಲಿರುವ ರಾಗಿಣಿಯನ್ನು ನಿಮ್ಹಾನ್ಸ್ ಪಕ್ಕದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ಆದರೆ ನಿನ್ನೆಯಿಂದ ಬೆನ್ನುನೋವು ಸೇರಿದಂತೆ ಅನಾರೋಗ್ಯದ ಕಾರಣ ಹೇಳಿದ್ದ ರಾಗಿಣಿ, ಇಂದು ಸಾಂತ್ವನ ಕೇಂದ್ರದಲ್ಲಿ ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದ್ದರಿಂದ ನನಗೆ ನಿದ್ರೆ ಮಾಡಲು ಆಗಿಲ್ಲ. ಜೊತೆಗೆ ಸಾಂತ್ವನ ಕೇಂದ್ರದ ತಿಂಡಿಯೂ ಚೆನ್ನಾಗಿಲ್ಲ. ಹೀಗಾಗಿ ನನ್ನ ಆರೋಗ್ಯ ಹದಗೆಡುತ್ತಿದೆ. ನನಗೆ ಮನೆಯಿಂದ ಊಟ ತರಿಸಿಕೊಡಿ. ನನ್ನನ್ನು ಇಲ್ಲಿಂದ ಬೇರೆ ಕಡೆ ಕರೆದುಕೊಂಡು ಹೋಗಿ. ಸಿಸಿಬಿ ಇನ್ಸ್ಪೆಕ್ಟರ್ಗೆ ಕರೆ ಮಾಡಿ ಎಂದು ಮಹಿಳಾ ಪೊಲೀಸ್ ಸಿಬ್ಬಂದಿ ಜತೆ ರಂಪಾಟ ನಡೆಸಿದ್ದಾರೆ ಎನ್ನಲಾಗಿದೆ.
ರಾಗಿಣಿ ರಂಪಾಟ ಹೆಚ್ಚುತ್ತಿದ್ದಂತೆ ಮಹಿಳಾ ಸಾಂತ್ವನ ಕೇಂದ್ರಕ್ಕೆ ಮಹಿಳಾ ಪೊಲೀಸ್ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಜತೆಗೆ ವಿಚಾರಣೆಂದು ತೆರಳಿದ್ದ ಸಿಸಿಬಿ ಮಹಿಳಾ ಪೊಲೀಸರಿಗೆ ಸಹಕಾರ ನೀಡದೇ ಅವ್ಯವಸ್ಥೆಯ ಕಾರಣ ನೀಡುತ್ತಿರುವುದು ತಲೆನೋವಾಗಿ ಪರಿಣಮಿಸಿದೆ.
ಇಂದು ಬೆಳಿಗ್ಗೆ 10ಗಂಟೆಗೆ ಸಿಸಿಬಿ ಅಧಿಕಾರಿಗಳು ರಾಗಿಣಿ ವಿಚಾರಣೆ ಆರಂಭಿಸಬೇಕಿತ್ತು. ಆದರೆ ಆಕೆ ಕಿರಿಕ್ ಮಾಡುತ್ತಿರುವುದರಿಂದ ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ. ನಾಳೆಗೆ ರಾಗಿಣಿ ಸಿಸಿಬಿ ಕಸ್ಟಡಿ ಕೊನೆಗೊಳ್ಳುತ್ತಿದ್ದು ಅಷ್ಟರೊಳಗೆ ಮತ್ತಷ್ಟು ವಿಚಾರಣೆ ನಡೆಸುವ ಅನಿವಾರ್ಯತೆ ಎದುರಾಗಿದೆ.
ಮತ್ತೊಬ್ಬ ರಾಗಿಣಿ ಆಪ್ತ ಸೆರೆ..!
ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ನಟಿ ರಾಗಿಣಿ ದ್ವಿವೇದಿಯ ಮತ್ತೊಬ್ಬ ಆಪ್ತ ಪ್ರಶಾಂತ್ ರಂಕಾನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ಇನ್ಸ್ಪೆಕ್ಟರ್ ಪುನೀತ್ ನೇತೃತ್ವದ ತಂಡ ಪ್ರಶಾಂತ್ ರಂಕಾನನ್ನು ಸೆರೆ ಹಿಡಿದು ತಂದಿದೆ. ಡ್ರಗ್ಸ್ ಪ್ರಕರಣದಲ್ಲಿ 4ನೇ ಆರೋಪಿಯಾಗಿರುವ ಪ್ರಶಾಂತ್ ರಂಕಾ, ರಾಗಿಣಿ ಸ್ನೇಹಿತ ರವಿಶಂಕರ್ ಆಪ್ತನಾಗಿದ್ದಾನೆ.