ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ನಂಟಿನ ಆರೋಪದಲ್ಲಿ ಅರೆಸ್ಟ್ ಆಗಿರುವ ಆರೋಪಿಗಳ ಡೋಪಿಂಗ್ ಟೆಸ್ಟ್ ವೇಳೆ ಸ್ಯಾಂಪಲ್ ಪಡೆದು ಲ್ಯಾಬ್‍ಗೆ ರವಾನೆಯಲ್ಲಿ ಸಿಸಿಬಿ ಪೊಲೀಸರು ಯಡವಟ್ಟು ಮಾಡಿಕೊಂಡಿದ್ದಾರೆ.
ಕಳೆದ ತಿಂಗಳು ನಟಿಯರಾದ ರಾಗಿಣಿ, ಸಂಜನಾ ಗಲ್ರಾನಿ ಅವರನ್ನು ಸಿಸಿಬಿ ಪೊಲೀಸರು ಡೋಪಿಂಗ್ ಟೆಸ್ಟ್‍ಗೆ ಒಳಪಡಿಸಿದ್ದರು. ರಕ್ತ, ಮೂತ್ರದ ಸ್ಯಾಂಪಲ್ ಜತೆಗೆ ತಲೆ ಕೂದಲಿನ ಮಾದರಿಯನ್ನೂ ಸಂಗ್ರಹಿಸಲಾಗಿತ್ತು. ಮಡಿವಾಳದ ಎಫ್‍ಎಸ್‍ಎಲ್ ಮೂಲಕ ತಲೆ ಕೂದಲಿನ ಸ್ಯಾಂಪಲನ್ನು ಪ್ಲಾಸ್ಟಿಕ್ ಕವರ್‍ನಲ್ಲಿ ಸುತ್ತಿ ಹೈದರಾಬಾದ್‍ನ ಪ್ರಯೋಗಾಲಕ್ಕೆ ಕಳಿಸಲಾಗಿತ್ತು.
ಆದರೆ, ಹೈದರಾಬಾದ್‍ಗೆ ಕಳಿಸಿದ ತಲೆಕೂದಲಿನ ಸ್ಯಾಂಪಲನ್ನು ವಾಪಸ್ ಕಳಿಸಲಾಗಿದೆ. ಪ್ಲಾಸ್ಟಿಕ್ ಕವರ್‍ನಲ್ಲಿ ಸುತ್ತಿಕಳಿಸಿದ್ದರಿಂದ ನೈಜತೆ ಹೊರಟು ಹೋಗಿದೆ, ಮತ್ತೆ ಕಾಟನ್ ಟಿಶ್ಯೂನಲ್ಲಿ ಸುತ್ತಿ ಮತ್ತೊಮ್ಮೆ ಕಳಿಸಲಾಗಿದೆ. ಹೀಗಾಗಿ ಡೋಪಿಂಗ್ ಟೆಸ್ಟ್ ವರದಿ ಬರಲು ವಿಳಂಬವಾಗಿದೆ ಎನ್ನಲಾಗಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸಣ್ಣ ತಾಂತ್ರಿಕ ಕಾರಣದಿಂದ ಸಮಸ್ಯೆಯಾಗಿತ್ತು. ಈಗ ಎಲ್ಲವೂ ಸರಿಯಾಗಿದೆ ಎಂದಿದ್ದಾರೆ.
ರಕ್ತ ಹಾಗೂ ಮೂತ್ರದ ಮಾದರಿ ಎಫ್‍ಎಸ್‍ಎಲ್ ಪ್ರಯೋಗಾಲಯದಲ್ಲಿದೆ. ಮೊದಲ ಬಾರಿಗೆ ತಲೆಗೂದಲು ಪರೀಕ್ಷೆ ಮಾಡಿಸಲಾಗಿದೆ. ಹೀಗಾಗಿ ತಲೆಕೂದಲು ರವಾನೆಯಲ್ಲಿ ತಾಂತ್ರಿಕ ಸಮಸ್ಯೆಯಾಗಿತ್ತು. ಈಗ ಮತ್ತೊಮ್ಮೆ ಸ್ಯಾಂಪಲ್ ರವಾನೆ ಮಾಡಿದ್ದೇವೆ. ಸ್ಯಾಂಪಲ್‍ನ ವರದಿಗಾಗಿ ಕಾಯುತ್ತಿದ್ದೇವೆ. ಇದರ ಜತೆಗೆ ತಾಂತ್ರಿಕ ಪುರಾವೆಗಳು, ಜಪ್ತಿ ಮಾಡಲಾದ ವಸ್ತುಗಳು ಪ್ರಕರಣಕ್ಕೆ ಪೂರಕವಾದ ಸಾಕ್ಷ್ಯಗಳಾಗಿವೆ ಎಂದು ಸಂದೀಪ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.