ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಜಾಲ ಕೆದಕುತ್ತಿರುವ ಸಿಸಿಬಿ ಪೊಲೀಸರಿಗೆ ಆಘಾತಕಾರಿ ಸಂಗತಿಗಳು ಹೊರ ಬರುತ್ತಿವೆ. ಕೆಪಿಎಲ್ ತಂಡಗಳ ಮಾಲೀಕರು ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದ ನಟಿ ರಾಗಿಣಿ, ಪಾರ್ಟಿಗಳಲ್ಲಿ ಡ್ರಗ್ಸ್ ಬಳಸುತ್ತಿದ್ರಾ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಮಹಿಳಾ ಸಾಂತ್ವನ ಕೇಂದ್ರದಲ್ಲಿಯೇ ನಟಿ ರಾಗಿಣಿಯ ವಿಚಾರಣೆಯನ್ನು ಸಿಸಿಬಿ ಅಧಿಕಾರಿ ಅಂಜುಮಾಲಾ ನಾಯಕ್ ನೇತೃತ್ವದ ತಂಡ ಮುಂದುವರೆಸಿದೆ. ನಿನ್ನೆ ನಡೆದ ವಿಚಾರಣೆ ವೇಳೆ ಯಾವುದೇ ಮಾಹಿತಿ ನೀಡದೆ ನನಗೇನೂ ಗೊತ್ತಿಲ್ಲ ಎಂದು ರಾಗಿಣಿ ಹೇಳಿದ್ದಳಂತೆ. ಈ ಹಿನ್ನೆಲೆಯಲ್ಲಿ ಇಂದು ಮತ್ತೆ ಸಿಸಿಬಿ ತಂಡ ದಾಖಲೆಗಳನ್ನು ಮುಂದಿಟ್ಟುಕೊಂಡು ರಾಗಿಣಿ ವಿಚಾರಣೆ ನಡೆಸುತ್ತಿದೆ.
ಹಲವು ಪಾರ್ಟಿಗಳಲ್ಲಿ ಪಾಲ್ಗೊಂಡಿರುವ ರಾಗಿಣಿ ದ್ವಿವೇದಿ, ಎಲ್ಲೆಲ್ಲಿ, ಯಾರ ಜೊತೆ, ಯಾವಾಗ ಪಾರ್ಟಿ ನಡೆಸಿದ್ದೀರಿ, ಯಾವ ಪಾರ್ಟಿಗಳಲ್ಲಿ ಭಾಗವಹಿಸಿದ್ದೀರಿ, ಪಾರ್ಟಿ ಆಯೋಜಿಸಿದವರು ಯಾರು ಎಂಬುದರ ಬಗ್ಗೆ ಸಿಸಿಬಿ ತಂಡ ವಿವರವಾದ ಮಾಹಿತಿ ಪಡೆಯುತ್ತಿದೆ.
ಪ್ರಮುಖವಾಗಿ ಉದ್ಯಮಿಗಳ ಜತೆ ನಡೆಸಿರುವ ಪಾರ್ಟಿಗಳ ಬಗ್ಗೆ ವಿವರಣೆ ಪಡೆಯುತ್ತಿದೆ. ಕೆಪಿಎಲ್ನ ಬಳ್ಳಾರಿ ತಂಡ ಸಹ ಮಾಲೀಕಳಾಗಿದ್ದ ರಾಗಿಣಿ, ತಂಡದ ಮಾಲೀಕ ಅರವಿಂದರೆಡ್ಡಿ ಅವರ ಫ್ರೇಜರ್ಟೌನ್ನ ಮನೆಯಲ್ಲಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಈ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ ಮಾಡಿದ್ದೀರಾ ಅಥವಾ ಡ್ರಗ್ಸ್ ಮಾರಿದ್ದಳಾ ಎಂಬುದರ ಬಗ್ಗೆ ರಾಗಿಣಿ ಬಾಯಿ ಬಿಡಿಸುವ ಪ್ರಯತ್ನ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ತಂದೆ ತಾಯಿ ನೋಡಲು ಹಠ..
ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ತಂದೆ-ತಾಯಿಯನ್ನು ನೋಡಬೇಕು ಎಂದು ಹಠ ಹಿಡಿದಿದ್ದಾಳೆ ಎನ್ನಲಾಗಿದೆ. ತಂದೆ-ತಾಯಿಯನ್ನು ಒಂದು ಸಲ ಭೇಟಿಯಗಲು ಅವಕಾಶ ನೀಡುವಂತೆ ಸಿಸಿಬಿ ಪೊಲೀಸರ ಮುಂದೆ ಅಂಗಲಾಚುತ್ತಿದ್ದಾಳೆ. ಆದರೆ, ಕಸ್ಟಡಿಯಲ್ಲಿರುವಾಗ ಆರೋಪಿಗಳು ಯಾರ ಭೇಟಿಗೂ ಅವಕಾಶ ಇಲ್ಲ ಎಂದ ಸಿಸಿಬಿ ಅಧಿಕಾರಿಗಳು ತಿಳಿಸಿದ್ದರು ಮೊಂಡುತನ ಪ್ರದರ್ಶನ ಮಾಡುತ್ತಿದ್ದಾಳೆ ಎನ್ನಲಾಗಿದೆ.
ಇತ್ತ, ಮಗಳ ಭೇಟಿಗಾಗಿ ಇಂದೂ ಕೂಡ ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಂದಿದ್ದ ಪೋಷಕರಿಗೆ ರಾಗಿಣಿ ಭೇಟಿ ಮಾಡಲು ಅವಕಾಶ ನಿರಾಕರಿಸಲಾಗಿದೆ. ಹೀಗಾಗಿ ಅವರು ಮನೆಯಿಂದ ತಂದಿದ್ದ ಬಟ್ಟೆಯನ್ನು ಕೊಟ್ಟು ವಾಪಸ್ ತೆರಳಿದ್ದಾರೆ.