ಕ್ರಿಕೆಟ್ ನಲ್ಲಿ ಪದಗಳ ಜೊತೆ ಆಟ ಆಡಬಾರದು… ಕೌಶಲ್ಯಗಳ ಜೊತೆ ಆಟವಾಡಬೇಕು- ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್. ವಿಶ್ವ ಕ್ರಿಕೆಟ್ ನ ಜೀನಿಯಸ್ ಆಟಗಾರ. ಕ್ರಿಕೆಟ್ ಆಟವನ್ನು ತನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸಿದ ಕ್ರಿಕೆಟಿಗ. ವೃತ್ತಿ ಬದುಕಿನಲ್ಲಿ ರಾಹುಲ್ ದ್ರಾವಿಡ್ ತಂಡಕ್ಕೆ ಚೌಕಿದಾರನಾಗಿದ್ದರು. ಇನ್ನು ನಿವೃತ್ತಿಯ ನಂತರ ಯುವ ಕ್ರಿಕೆಟಿಗರಿಗೆ ಬೆನ್ನುಲುಬಾಗಿ ನಿಂತಿದ್ದಾರೆ. ತನ್ನ ಉಸಿರೇ ಕ್ರಿಕೆಟ್ ಎಂದು ನಂಬಿಕೊಂಡಿರುವ ದ್ರಾವಿಡ್ ಈಗ ಗುರುವಾಗಿ ಹೊಸ ಆಟಗಾರರ ಅನ್ವೇಷಣೆಯಲ್ಲಿ ನಿರತರಾಗಿದ್ದಾರೆ.
ಮನಸು ಮಾಡಿದ್ರೆ ರಾಹುಲ್ ದ್ರಾವಿಡ್ ಆರಾಮವಾಗಿ ವೀಕ್ಷಣೆ ವಿವರಣೆ ಮಾಡಿಕೊಂಡು, ಕೆಎಸ್‍ಸಿಎ, ಬಿಸಿಸಿಐನ ಎಸಿ ರೂಂನಲ್ಲಿ ಕುಳಿತುಕೊಂಡು ಕ್ರಿಕೆಟ್ ರಾಜ್ಯಭಾರ ಮಾಡಬಹುದಿತ್ತು. ಆದ್ರೆ ದ್ರಾವಿಡ್‍ಗೆ ಅದು ಬೇಕಾಗಿಲ್ಲ. ಕ್ರಿಕೆಟ್ ತರಬೇತುದಾರನಾಗಿ ಯುವ ಆಟಗಾರರ ಬಾಳಲ್ಲಿ ಬೆಳಕು ತರುವ ಕೆಲಸವನ್ನು ಮಾಡುತ್ತಿದ್ದಾರೆ.
ಇದೀಗ ರಾಹುಲ್ ದ್ರಾವಿಡ್ ಪ್ರಸ್ತುತ ವಿಶ್ವ ಕ್ರಿಕೆಟ್
ನಲ್ಲಿ ನಡೆಯುತ್ತಿರುವ ಕೆಲವೊಂದು ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಮ್ಯಾಥ್ಯೂ ವಾಡೆ ಅವರು ಮುಂಬರುವ ಭಾರತ ತಂಡದ ಪ್ರವಾಸದ ವೇಳೆ ವಿರಾಟ್ & ಕಂಪೆನಿ ವಿರುದ್ಧ ಮಾತಿನ ಸಮರ ನಡೆಸುವುದಿಲ್ಲ ಎಂದು ಹೇಳಿದ್ದರು. ಅದರಲ್ಲೂ ಮುಖ್ಯವಾಗಿ ವಿರಾಟ್ ಕೊಹ್ಲಿ ತಂಟೆಗೆ ಹೋಗಲ್ಲ ಎಂದಿದ್ದರು.
ಮ್ಯಾಥ್ಯೂ ವಾಡೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರಾಹುಲ್ ದ್ರಾವಿಡ್, ಕ್ರಿಕೆಟ್ ಆಟ ಪದಗಳ ಸಮರವಾಗಬಾರದು. ಅದು ಕೌಶಲ್ಯಗಳ ಸ್ಪರ್ಧೆಯಾಗಬೇಕು ಎಂದು ಹೇಳಿದ್ದಾರೆ. ಕ್ರಿಕೆಟ್ ಕೌಶಲ್ಯಗಳ ಆಟ. ಹೀಗಾಗಿ ಪಂದ್ಯಗಳ ಮಧ್ಯೆ ಮಾತಿನ ಸಮರ ನಡೆಸುವುದು ಸೂಕ್ತವಲ್ಲ. ಕೊನೆಗೆ ಅಲ್ಲಿ ಸಿಗೋದು ನಮ್ಮ ಆಟ. ನಮ್ಮ ಕೌಶಲ್ಯವೇ ಹೊರತು ಪದಗಳ ನಡುವಿನ ಸಮರವಲ್ಲ. ಹಾಗೇ ಸ್ಪರ್ಧೆಯೂ ಮುಖ್ಯವಾಗಿರುತ್ತದೆ. ಕೌಶಲ್ಯ ಯಾವತ್ತಿಗೂ ಉನ್ನತ ಮಟ್ಟದಲ್ಲಿರುತ್ತೆ ಎಂಬ ಅಭಿಪ್ರಾಯವನ್ನು ದ್ರಾವಿಡ್ ವ್ಯಕ್ತಪಡಿಸಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ ಜಾಮಿ, ವಿರಾಟ್‍ಗೆ ಆಕ್ರಮಣಕಾರಿ ಪ್ರವೃತ್ತಿ, ಸ್ಪರ್ಧೆ ಹೇಗಿರುತ್ತೆ ಎಂಬುದನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಆಸ್ಟ್ರೇಲಿಯನ್ನರು ವಿರಾಟ್ ವಿರುದ್ಧ ವಾಕ್ಸಮರ ನಡೆಸದಿದ್ರೂ ಅವರ ಆಟಕ್ಕೆ. ಅವರ ಪ್ರವೃತ್ತಿಗೆ ಏನು ತೊಂದರೆ ಆಗಲ್ಲ ಎಂದಿದ್ದಾರೆ. ವಿರಾಟ್ ಕೊಹ್ಲಿ ಹೋರಾಟವನ್ನು ಇಷ್ಟಪಡುತ್ತಾರೆ. ಸ್ಪರ್ಧೆಯನ್ನು ಸದಾ ಎದುರು ನೋಡುತ್ತಿರುತ್ತಾರೆ. ಹಾಗೇ ಆಕ್ರಮಣಕಾರಿ ಪ್ರವೃತ್ತಿಯನ್ನು ಹೊಂದಿದ್ದಾರೆ. ವಿರಾಟ್ ನಲ್ಲಿ ಆಕ್ರಮಣಕಾರಿ ಪ್ರವೃತ್ತಿಯನ್ನು ನೀವು ಬಯಸದೇ ಇದ್ರೂ ಆತ ಎಷ್ಟು ಆಕ್ರಮಣಕಾರಿಯಾಗುತ್ತಾನೆ ಎಂಬುದು ನನಗೆ ಕೂಡ ಗೊತ್ತಿಲ್ಲ. ಯಾಕಂದ್ರೆ ವಿರಾಟ್ ಯಾವಾಗಲೂ ಆಟದಲ್ಲಿ ಪ್ರಾಬಲ್ಯ ಸಾಧಿಸುವುದನ್ನು ಇಷ್ಟಪಡುತ್ತಾರೆ. ಆಸೀಸ್ ಬೌಲರ್‍ಗಳಾದ ಕ
ಮಿನ್ಸ್ ಸ್ಟಾರ್ಕ್, ಪ್ಯಾಟಿನ್ಸನ್, ಹಾಜ್ಲೆವುಡ್ ನಂತರ ಬೌಲರ್‍ಗಳನ್ನು ಹೇಗೆ ಎದುರಿಸಬೇಕು ಎಂಬುದು ಸಹ ಅವರಿಗೆ ಗೊತ್ತಿದೆ ಅಂತಾರೆ ರಾಹುಲ್ ದ್ರಾವಿಡ್.
ಇನ್ನು ಮ್ಯಾಥ್ಯೂ ವಾಡೆ ಇನ್ನೊಂದು ಅರ್ಥದಲ್ಲಿ ಕೂಡ ಈ ಹೇಳಿಕೆಯನ್ನು ನೀಡಿರಬಹುದು. ಮ್ಯಾಥ್ಯೂ ವಾಡೆ ಅವರ ಹೇಳಿಕೆ ಪ್ರಕಾರ, ಆಸ್ಟ್ರೇಲಿಯಾ ಮುಂಬರುವ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೌಶಲ್ಯದ ಆಟದ ಕಡೆಗೆ ಹೆಚ್ಚು ಗಮನ ಹರಿಸುವ ಸುಳಿವನ್ನು ನೀಡಿದ್ದಾರೆ. ಒಂದು ವೇಳೆ ಆಸ್ಟ್ರೇಲಿಯನ್ನರು ಅದೇ ದಾರಿಯಲ್ಲಿ ಸಾಗಿದ್ರೆ ಅವರಿಗೆ ಒಳ್ಳೆಯದ್ದು. ಒಂದು ವೇಳೆ ಏನಾದ್ರೂ ತೊಂದರೆ ಅಥವಾ ಸಣ್ಣ ಎಡವಟ್ಟು ಮಾಡಿದ್ರೆ ವಿರಾಟ್ ಏನು ಮಾಡಬಹುದು ಎಂಬುದು ಎಲ್ಲರಿಗೂ ಗೊತ್ತಿದೆ ಅಂತ ದ್ರಾವಿಡ್ ಆಸ್ಟ್ರೇಲಿಯಾ ತಂಡಕ್ಕೆ ಪರೋಕ್ಷವಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಡಿಸೆಂಬರ್‍ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಲ್ಕು ಟೆಸ್ಟ್ ಪಂದ್ಯಗಳು ನಡೆಯಲಿವೆ. ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 3ರಂದು ಬ್ರಿಸ್ಬೇನ್ ನ ಗಬ್ಬಾ ಮೈದಾನದಲ್ಲಿ ನಡೆಯಲಿದೆ.








