ವಿಶ್ವಕಪ್ ಬಳಿಕ `ಟೀಂ ಇಂಡಿಯಾಗೆ ದ್ರಾವಿಡ್ ದ್ರೋಣಾಚಾರ್ಯ’ Rahul Dravid saaksha tv
ನವದೆಹಲಿ : ಐಸಿಸಿ ಟಿ-20 ವಿಶ್ವಕಪ್ ಬಳಿಕ ಟೀಂ ಇಂಡಿಯಾದ ಮಾಜಿ ನಾಯಕ, ದಿ ಗ್ರೇಟ್ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಆಗುವುದು ಬಹುತೇಕ ಖಚಿತವಾಗಿದೆ.
ಹಾಲಿ ಕೋಚ್ ರವಿಶಾಸ್ತ್ರಿ ಅವರ ಅವಧಿ ಅಕ್ಟೋಬರ್ 17 ರಿಂದ ಆರಂಭವಾಗಲಿರುವ ಟಿ-20 ವಲ್ರ್ಡ್ ಕಪ್ ಬಳಿಕ ಮುಕ್ತಾಯವಾಗಲಿದೆ.
ಹೀಗಾಗಿ ಟೀಂ ಇಂಡಿಯಾದ ಮುಂದಿನ ಕೋಚ್ ಯಾರಾಗ್ತಾರೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಈ ಕೋಚ್ ಹುದ್ದೆ ರೇಸ್ ನಲ್ಲಿ ಅನಿಲ್ ಕುಂಬ್ಳೆ, ವಿರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಹೆಸರ ಕೇಳಿಬಂದಿತ್ತು.
ಮುಖ್ಯವಾಗಿ ಬಿಸಿಸಿಐ ಬಿಗ್ ಬಾಸ್ ಗಳು ಕನ್ನಡಿಗರಾದ ರಾಹುಲ್ ದ್ರಾವಿಡ್ ಅಥವಾ ಅನಿಲ್ ಕುಂಬ್ಳೆ ಅವರಿಗೆ ದ್ರೋಣಾಚಾರ್ಯ ಪಟ್ಟ ಕಟ್ಟಲು ಸಾಕಷ್ಟು ಕಸರತ್ತು ನಡೆಸಿದೆ ಎಂದು ಹೇಳಲಾಗಿತ್ತು.
ಇದೀಗ ಆ ಕಸರತ್ತುಗಳು ಮುಕ್ತಾಯವಾಗಿದ್ದು, ರಾಹುಲ್ ದ್ರಾವಿಡ್ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಹುಲ್ ದ್ರಾವಿಡ್ ರಾಷ್ಟ್ರೀಯ ತಂಡದ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲು ಸಿದ್ಧರಾಗಿದ್ದಾರೆ ಎಂದು ಎಎನ್‍ಐಗೆ ಮೂಲಗಳು ದೃಢಪಡಿಸಿವೆ.
ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.









