ಐಸಿಸಿ ಟಿ-20 ಶ್ರೇಯಾಂಕ ಪಟ್ಟಿ- ಅಗ್ರ ಸ್ಥಾನದಲ್ಲಿ ಬಾಬರ್ ಅಝಮ್- 6ನೇ ಸ್ಥಾನದಲ್ಲಿ ರಾಹುಲ್
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಝಮ್ ಅವರು ಐಸಿಸಿ ಟಿ-20 ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಟೀಮ್ ಇಂಡಿಯಾದ ಹಾಲಿ ಉಪನಾಯಕ ಕೆ.ಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಕ್ರಮವಾಗಿ ಆರು ಮತ್ತು ಎಂಟನೇ ಸ್ಥಾನದಲ್ಲಿದ್ದಾರೆ. ಕೆ.ಎಲ್. ರಾಹುಲ್ ಅವರು ಟಿ-20 ವಿಶ್ವಕಪ್ ನಲ್ಲಿ ಸತತ ಮೂರು ಅರ್ಧಶತಕಗಳನ್ನು ದಾಖಲಿಸಿದ್ದರು. ಅಲ್ಲದೆ 727 ಅಂಕಗಳನ್ನು ಪಡೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ 698 ಅಂಕಕ್ಕೆ ಸಮಧಾನಪಟ್ಟುಕೊಂಡಿದ್ದಾರೆ.
ಪಾಕ್ ಕ್ರಿಕೆಟಿಗ ಬಾಬರ್ ಅಝಮ್ ಅವರು 839 ಅಂಕ ಪಡೆದ್ರೆ, ಇಂಗ್ಲೆಂಡ್ ನ ಡೇವಿಡ್ ಮಲಾನ್ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ದಕ್ಷಿಣ ಆಫ್ರಿಕಾದ ಆಡೇನ್ ಮಕ್ರಾಮ್, ನ್ಯೂಜಿಲೆಂಡ್ ನ ಡೆವೊನ್ ಕಾನ್ವೆ, ಪಾಕಿಸ್ತಾನದ ಆರಂಭಿಕ ಮಹಮ್ಮದ್ ರಿಜ್ವಾನ್, ಅವರು ನಂತರದ ಐದು ಸ್ಥಾನಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ನಾಯಕ ಆರೋನ್ ಫಿಂಚ್ ಏಳನೇ ಸ್ಥಾನದಲ್ಲಿದ್ದಾರೆ.
ಇನ್ನು ಬೌಲಿಂಗ್ ನಲ್ಲಿ ಶ್ರೀಲಂಕಾದ ವಾನಿಂದು ಹಸರಂಗ ಅಗ್ರ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಟಬ್ರಾಝ್ ಶಂಸಿ ಅವರು ಎರಡನೇ ಸ್ಥಾನ ಹಾಗೂ ಆಸ್ಟ್ರೇಲಿಯಾದ ಆಡಂ ಝಂಪಾ ಮೂರನೇ ಸ್ಥಾನಪಡೆದುಕೊಂಡಿದ್ದಾರೆ. ಭಾರತದ ಯಾವೊಬ್ಬ ಬೌಲರ್ ಕೂಡ ಟಾಪ್ ಟೆನ್ ನಲ್ಲಿ ಕಾಣಿಸಿಕೊಂಡಿಲ್ಲ.
ಆಲ್ ರೌಂಡರ್ ವಿಭಾಗದಲ್ಲಿ ಮಹಮ್ಮದ್ ನಬಿ ಅವರು ಮೊದಲ ಸ್ಥಾನ ಹಾಗೂ ಬಾಂಗ್ಲಾದ ಶಕೀಬ್ ಉಲ್ ಹಸನ್ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆಲ್ ರೌಂಡರ್ ವಿಭಾಗದಲ್ಲೂ ಭಾರತೀಯ ಆಟಗಾರರು ಕಾಣಿಸಿಕೊಂಡಿಲ್ಲ.
ಈ ನಡುವೆ ಟಿ-20 ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡೇವಿಡ್ ವಾರ್ನರ್ ಮತ್ತು ಮಿಟ್ಚೆಲ್ ಮಾರ್ಶ್ ಅವರು ಶ್ರೇಯಾಂಕಪಟ್ಟಿಯಲ್ಲಿ ಬಡ್ತಿ ಪಡೆದುಕೊಂಡಿದ್ದಾರೆ.