ಚುನಾವಣಾ ಅಕ್ರಮಗಳ ಆರೋಪ ಹೊರಿಸಿ ದೆಹಲಿಯಲ್ಲಿ ಬೀದಿಗಿಳಿದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ಕೇಂದ್ರ ಸರ್ಕಾರದ ಅಡಿಪಾಯವನ್ನೇ ನಡುಗಿಸುವಂತಹ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧದ ಹೋರಾಟದ ನಡುವೆಯೇ ರಾಹುಲ್ ಗಾಂಧಿ ಮೋದಿ ಸರ್ಕಾರದ ಒಳಗಿನ ರಹಸ್ಯಗಳನ್ನು ಬಿಚ್ಚಿಡುವ ಹೊಸ ಪ್ಲಾನ್ ಘೋಷಿಸಿದ್ದಾರೆ.
200 ಅಧಿಕಾರಿಗಳು ನಮ್ಮ ಖಬರಿಗಳು
ನರೇಂದ್ರ ಮೋದಿ ಅವರ ಆಡಳಿತ ಯಂತ್ರದ ಒಳಗಿರುವ ಕನಿಷ್ಠ 200 ಅಧಿಕಾರಿಗಳು ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಸಿಬಿಐ, ಪೊಲೀಸ್ ಮತ್ತು ವಿವಿಧ ತನಿಖಾ ಸಂಸ್ಥೆಗಳ ಅಧಿಕಾರಿಗಳು ನಮಗೆ ಸರ್ಕಾರದ ಒಳಗೆ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಶೇಕಡಾ 50ರಷ್ಟು ಪೊಲೀಸರು ನಮ್ಮ ಹೋರಾಟ ಸರಿಯಾಗಿದೆ ಎಂಬ ಅಭಿಪ್ರಾಯ ಹೊಂದಿದ್ದಾರೆ. ಹೀಗಾಗಿ ಈ ಹೋರಾಟ ಕೇವಲ ಕಾಂಗ್ರೆಸ್ ಪಕ್ಷದ್ದಲ್ಲ, ಬದಲಿಗೆ ವ್ಯವಸ್ಥೆಯ ಒಳಗಿರುವ ಪ್ರಾಮಾಣಿಕ ಅಧಿಕಾರಿಗಳ ಬೆಂಬಲವೂ ನಮಗಿದೆ ಎಂದು ಅವರು ಬಾಂಬ್ ಸಿಡಿಸಿದ್ದಾರೆ.
ಸುಪ್ರೀಂ ಕೋರ್ಟ್ ಗೆ ಜನಾಂದೋಲನದ ಜಾಥಾ
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ರಾಜಕೀಯ ನಾಯಕರನ್ನು ನೇರವಾಗಿ ಭೇಟಿಯಾಗಲು ನಿರಾಕರಿಸಿದ ಬೆನ್ನಲ್ಲೇ ರಾಹುಲ್ ಗಾಂಧಿ ತಮ್ಮ ಕಾರ್ಯತಂತ್ರವನ್ನು ಬದಲಿಸಿದ್ದಾರೆ. ನ್ಯಾಯಾಲಯದ ಸೂಚನೆಯಂತೆ ಅಧಿಕೃತವಾಗಿ ಅರ್ಜಿ ಸಲ್ಲಿಸಲು ನಿರ್ಧರಿಸಿರುವ ಅವರು, ಇದನ್ನು ಒಂದು ಜನಾಂದೋಲನದ ರೀತಿಯಲ್ಲಿ ಕೈಗೊಳ್ಳಲಿದ್ದಾರೆ. ದೇಶದ ರಕ್ಷಣೆ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಸುತ್ತಿರುವ ಈ ಹೋರಾಟಕ್ಕೆ ಇಡೀ ದೇಶದ ಜನರೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದಾರೆ ಎಂದು ಅವರು ಘೋಷಿಸಿದರು.
ಬಿಜೆಪಿ ನಾಯಕರಿಗೂ ಮುಕ್ತ ಆಹ್ವಾನ
ಸಂವಿಧಾನದ ಮೇಲೆ ದಾಳಿಯಾಗುತ್ತಿದೆ ಎಂದು ನೋವಾಗುತ್ತಿರುವ ಬಿಜೆಪಿಯ ಒಳಗಿರುವ ನಾಯಕರಿಗೂ ರಾಹುಲ್ ಗಾಂಧಿ ಮುಕ್ತ ಆಹ್ವಾನ ನೀಡಿದ್ದಾರೆ. ದೇಶದ ಭವಿಷ್ಯಕ್ಕಾಗಿ ನಡೆಸುತ್ತಿರುವ ಈ ಸಮರದಲ್ಲಿ ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸಬೇಕು. ಬಿಜೆಪಿಯಲ್ಲೂ ಸಂವಿಧಾನವನ್ನು ಪ್ರೀತಿಸುವವರಿದ್ದಾರೆ, ಅವರು ಕೂಡ ನಮ್ಮ ಹೋರಾಟದಲ್ಲಿ ಪಾಲ್ಗೊಳ್ಳಬಹುದು ಎಂದು ಅವರು ಹೇಳಿದ್ದಾರೆ. ಅನ್ಯಾಯದ ವಿರುದ್ಧದ ಈ ಧರ್ಮಯುದ್ಧದಲ್ಲಿ ಯಾರು ಕೂಡ ಹಿಂದೆ ಸರಿಯಬಾರದು ಎಂದು ಕರೆ ನೀಡಿದರು.
ನಾಲ್ವರ ವಿರುದ್ಧ ರಾಹುಲ್ ಸಮರ
ಈ ಹೋರಾಟವನ್ನು ರಾಹುಲ್ ಗಾಂಧಿ ಅವರು ದೇಶದ ಜನತೆ ವರ್ಸಸ್ ನಾಲ್ವರು ಪ್ರಭಾವಿ ನಾಯಕರು ಎಂದು ಬಿಂಬಿಸಿದ್ದಾರೆ. ಇಡೀ ದೇಶದ ಪೊಲೀಸ್ ವ್ಯವಸ್ಥೆ, ಸಿಆರ್ ಪಿ ಎಫ್ ಮತ್ತು ಸಾರ್ವಜನಿಕರು ಒಂದು ಕಡೆಯಾದರೆ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಅಜಿತ್ ದೋವಲ್ ಮತ್ತು ಗ್ಯಾನೇಶ್ ಕುಮಾರ್ ಇನ್ನೊಂದು ಕಡೆಯಿದ್ದಾರೆ. ಈ ನಾಲ್ವರಿಂದ ದೇಶದ ಭದ್ರತೆ ಮತ್ತು ಪ್ರಜಾಪ್ರಭುತ್ವಕ್ಕೆ ಕುತ್ತು ಬಂದಿದೆ. ಸತ್ಯ ನಮ್ಮ ಪರವಾಗಿರುವುದರಿಂದ ವಿಜಯ ನಮಗೇ ಸಿದ್ಧ ಎಂದು ರಾಹುಲ್ ಗಾಂಧಿ ಅಬ್ಬರಿಸಿದ್ದಾರೆ.







