ಚೀನಾದ ಟ್ಯಾಕ್ಟಿಕಲ್ ಮತ್ತು ಸ್ಟ್ರಾಟೆಜಿಕ್ ಪ್ಲಾನ್ ಬಗ್ಗೆ ರಾಗಾ ವಿವರಣೆ
ನವದೆಹಲಿ : ಕೊರೊನಾ ವೈರಸ್ ನಿಯಂತ್ರಣ, ಜಿಡಿಪಿ, ಚೀನಾ ಗಲಾಟೆ ವಿಚಾರಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿರಂತರವಾಗಿ ತೀವ್ರ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಇದೇ ವಿಚಾರಗಳಿಗೆ ಸಂಬಂಧಿಸಿದಂತೆ ಇಂದು ಅವರು ಒಂದು ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಚೀನಾದ ಟ್ಯಾಕ್ಟಿಕಲ್ ಮತ್ತು ಸ್ಟ್ರಾಟೆಜಿಕ್ ಪ್ಲ್ಯಾನ್ ಬಗ್ಗೆ ರಾಹುಲ್ ವಿವರಣೆ ನೀಡಿದ್ದಾರೆ.
ವಿಡಿಯೋದಲ್ಲಿ ಚೀನಾದ ಕುತಂತ್ರ, ಕಾರ್ಯತಂತ್ರದ ಬಗ್ಗೆ ರಾಹುಲ್ ಗಾಂಧಿ, ಲಡಾಖ್‌ನಲ್ಲಿ ಚೀನಾ ಪಡೆ ಭಾರತದ ಭೂ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಿದೆ ಇಲ್ಲಿ ಚೀನಾದ ಕಾರ್ಯತಂತ್ರ ಮತ್ತು ಆಟ ಕೇವಲ ಒಂದು ಗಡಿ ಸಮಸ್ಯೆಯಲ್ಲ. ತನ್ನ ಕುತಂತ್ರದ ಕಾರ್ಯತಂತ್ರವಿಲ್ಲದೆ ಚೀನಾ ಯಾವುದನ್ನೂ ಮಾಡುವುದಿಲ್ಲ.
ತಮ್ಮ ಕುತಂತ್ರ, ಕಾರ್ಯತಂತ್ರದ ಮೂಲಕ ಗಲ್ವಾನ್, ಡೆಮ್ಚೊಕ್ ಅಥವಾ ಪಾಂಗೊಂಗ್ ಲೇಕ್ ಯಾವುದೇ ಆಗಿರಲಿ ಅಲ್ಲಿ ತನ್ನ ಸ್ಥಾನವನ್ನು ಹೆಚ್ಚಿಸಿಕೊಳ್ಳಲು ಚೀನಾ ನೋಡುತ್ತಿದೆ. ತನ್ನ ಸ್ಥಾನವನ್ನು ಹೆಚ್ಚಿಸಿಕೊಂಡು ಭದ್ರಪಡಿಸಿಕೊಳ್ಳುವುದು ಚೀನಾದ ತಂತ್ರವಾಗಿದೆ, ಇದು ಕೇವಲ ಗಡಿ ಸಮಸ್ಯೆ ಮಾತ್ರವಲ್ಲ, ಗಡಿಯ ಮೂಲಕ ಭಾರತದ ಪ್ರಧಾನಿ ಮೇಲೆ ಒತ್ತಡ ಹಾಕುವ ತಂತ್ರ ಎಂದು ಹೇಳಿದ್ದಾರೆ.
ಇನ್ನು ವಿಡಿಯೋದಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್,ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರಲು ನಕಲಿ ಸ್ಟ್ರಾಂಗ್ ಮ್ಯಾನ್ ಎಂಬ ಚಿತ್ರಣವನ್ನು ರೂಪಿಸಿದಿದ್ದಾರೆ. ಇದೇ ಅವರ ದೊಡ್ಡ ಶಕ್ತಿಯಾಗಿದೆ, ಆಟದ ತಂತ್ರವಾಗಿದೆ.ಅವರ ವ್ಯಕ್ತಿತ್ವ, ಮಾತುಗಳು ಈಗ ಭಾರತಕ್ಕೆ ದೊಡ್ಡ ದೌರ್ಬಲ್ಯವಾಗಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ







