ದಲಿತ ದಂಪತಿ ಮೇಲೆ ಪೊಲೀಸರ ಹಲ್ಲೆ : ರಾಹುಲ್ ಗಾಂಧಿ ಆಕ್ರೋಶ
ನವದೆಹಲಿ : ಮಧ್ಯಪ್ರದೇಶದಲ್ಲಿ ದಲಿತ ದಂಪತಿ ಮೇಲೆ ಪೊಲೀಸರು ಹಲ್ಲೆ ಮಾಡಿದ ಪ್ರಕರಣವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದಲಿತ ದಂಪತಿ ಮೇಲೆ ಪೊಲೀಸರು ಹಲ್ಲೆ ನಡೆಸುತ್ತಿರುವ ವಿಡಿಯೋ ಟ್ಯಾಗ್ ಮಾಡಿ ಇಂತಹ ಮನಸ್ಥಿತಿ ಹಾಗೂ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದಿದ್ದಾರೆ.
ಏನಿದು ಘಟನೆ..?
ಮಧ್ಯಪ್ರದೇಶದ ಗುನಾದಲ್ಲಿ ಕಾಲೇಜು ನಿರ್ಮಾಣಕ್ಕೆ ಜಗನ್ ಪುರ ಚೌಕ್ ಪ್ರದೇಶದಲ್ಲಿ 20 ಎಕರೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಲಾಗಿದೆ. ಆದ್ರೆ ಈ ಜಾಗದಲ್ಲಿ ರಾಜಕುಮಾರ್ ಅಹಿರ್ವಾರ್ ಮತ್ತು ಅವರ ಪತ್ನಿ ಅನೇಕ ವರ್ಷಗಳಿಂದ ಕೃಷಿ ಮಾಡುತ್ತಿದ್ದರು. ನಿನ್ನೆ ಸ್ಥಳೀಯ ಆಡಳಿತ ಅಧಿಕಾರಿಗಳು ಅತಿಕ್ರಮಣ ತೆರವುಗೊಳಿಸಲು ಜೆಸಿಬಿಯೊಂದಿಗೆ ತೆರಳಿ ಹೊಲದಲ್ಲಿ ಬೆಳೆಗಳಿಗೆ ಹಾನಿ ಮಾಡಿದ್ದಾರೆ. ಇದನ್ನು ನಿಲ್ಲಿಸುವಂತೆ ದಲಿತ ದಂಪತಿ ಮನವಿ ಮಾಡಿಕೊಂಡಿದೆ. ಇವರ ಮನವಿಗೆ ಕ್ಯಾರೆ ಎನ್ನದ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ, ಈ ವೇಳೆ ದಂಪತಿ ಕ್ರಿಮಿನಾಶಕ ಸೇವಿಸಿದ್ದಾರೆ. ಕ್ರಿಮಿನಾಶಕ ಸೇವಿಸಿದ ದಂಪತಿ ಆಸ್ಪತ್ರೆಗೆ ಹೋಗಲು ನಿರಾಕರಿಸಿದಾಗ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲೇ ಪೊಲೀಸರು ಇಬ್ಬರನ್ನು ಥಳಿಸಿದ್ದಾರೆ. ಪತಿಯಿಂದ ದೂರವಿರುವಂತೆ ಪತ್ನಿಗೆ ತಾಕೀತು ಮಾಡಿದ ಮಹಿಳಾ ಪೊಲೀಸ್, ರಾಜಕುಮಾರ್ ಪತ್ನಿ ಸೀರೆಯನ್ನು ಕಿತ್ತು ಹಾಕಿದ್ದಾರೆ. ಮಕ್ಕಳ ಎದುರಲ್ಲೇ ಅಮಾನವೀಯವಾಗಿ ದಂಪತಿ ಥಳಿಸಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದೆ.