130 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ನಲ್ಲಿ ಬದಲಾವಣೆಯ ಪರ್ವ ಶುರುವಾಗಿದ್ಯಾ..? ಸಾಲು ಸಾಲು ಸೋಲು, ನಾಯಕರ ಬಂಡಾಯದಿಂದ ಕಾಂಗ್ರೆಸ್ ನ ಮನಸ್ಥಿತಿ ಚೇಂಜ್ ಆಗಿದ್ಯಾ..? ಈ ಪ್ರಶ್ನೆಗಳು ಸದ್ಯ ಈಗ ಕಾಡಲಾರಂಭಿಸಿವೆ.
ಕಾಂಗ್ರೆಸ್ ಎಂದ್ರೆ ಮೊದಲಿನಿಂದಲೂ ಒಂದು ದೂರು ಇದ್ದೇ ಇದೆ. ಅದರಲ್ಲಿ ಸೀನಿಯರ್ ಗಳಿಗೆ ತುಂಬಾ ಪ್ರಾಮುಖ್ಯತೆ ಕೊಡಲಾಗುತ್ತದೆ. ಅಲ್ಲಿ ಜ್ಯೂನಿಯರ್ ಲೀಡರ್ ಗೆ ಬೆಲೆ ಇಲ್ಲ ಎಂಬೋದು. ಇಂದು ಕಿರಿಯ ನಾಯಕರಿಗೆ ಬೆಲೆ ಇದ್ದರೂ ಅದು, ವಂಶ ಪಾರಂಪರಿಕವಾಗಿರುತ್ತೆ.
ಯುವ ನಾಯಕರತ್ತ ಚಿತ್ತ
ಹೌದು..! ಸಾಲು ಸಾಲು ಸೋಲುಂಡ ಕಾಂಗ್ರೆಸ್ ಗೆ ಸದ್ಯ ಭವಿಷ್ಯದ ಚಿಂತೆ ಎದುರಾಗಿದೆ. ಪಕ್ಷದಲ್ಲಿರುವ ಕಿರಿಯ ನಾಯಕರು, ಹಿರಿಯ ವಿರುದ್ಧ ಸಿಡಿದು ಬೇರೆ ಪಕ್ಷಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಸದ್ಯ ಆತಂಕದಲ್ಲಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಯುವಕರಿಗೆ ಅವಕಾಶ ಕೊಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಹುಲ್, ಜ್ಯೂ ಇಂದಿರಾ ದರ್ಬಾರು
ಸದ್ಯ ಕಾಂಗ್ರೆಸ್ ನಲ್ಲಿ ತುಸು ಆಕ್ಟೀವ್ ಆಗಿರುವ ನಾಯಕರು ಯಾರಾದರೂ ಇದ್ದರೇ ಅದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾತ್ರ. ಇನ್ನುಳಿದ ನಾಯಕರು ಆಯುಧವನ್ನ ಕೈಗೆತ್ತಿಕೊಳ್ಳುವ ಗೋಜಿಗೂ ಹೋಗುತ್ತಿಲ್ಲ.
ರಾಜಸ್ಥಾನ ಬಿಕ್ಕಟ್ಟಿಗೆ ರಾಗಾ, ಪ್ರಿಯಾಂಕಾ ಮದ್ದು
ರಾಜಸ್ಥಾನ ರಾಜಕೀಯ ಬಿಕ್ಕಟ್ಟು ದೇಶ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿತ್ತು. ಕಾಂಗ್ರೆಸ್ ನ ಇನ್ನೊಬ್ಬ ಯುವ ನಾಯಕ ಕಾಂಗ್ರೆಸ್ ಗೆ ಕೈ ಕೊಡ್ತಾರೆ ಎಂತಾನೇ ಹೇಳಲಾಗುತ್ತಿತ್ತು. ಆದ್ರೆ ರಾಹುಲ್ ಗಾಂಧಿ, ಪ್ರಿಯಾಂಕಾ ಈ ಬಿಕ್ಕಟ್ಟನ್ನು ನಿವಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದ ರೆಬೆಲ್ ನಾಯಕ ಸಚಿನ್ ಪೈಲಟ್ ಅವರ ಮನವೊಲಿಸುವಲ್ಲಿ ಈ ಉಭಯರು ಯಶಸ್ವಿಯಾಗಿದ್ದಾರೆ.
ರಾಹುಲ್, ಪ್ರಿಯಾಂಕಾ ವಾದ್ರಾ ಅವರ ಈ ಕಾರ್ಯ ಪಕ್ಷದಲ್ಲಿರುವ ಕಿರಿಯ ನಾಯಕರಿಗೆ ಬೂಸ್ಟ್ ನೀಡಿದೆ. ಅಲ್ಲದೆ ಕೆಲ ಹಿರಿಯ ನಾಯಕರೂ ಕೂಡ ಇವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಹಿರಿಯ ನಾಯಕರ ಕೈಯಲ್ಲಾಗದ ಕೆಲಸವನ್ನು ಈ ಯುವ ನೇತಾರರು ಮಾಡಿ ಮುಗಿಸಿರುವುದು ಎಲ್ಲರ ಗಮನ ಸೆಳೆದಿದೆ.
ಮಹೇಶ್ ಎಂ ದಂಡು








