ಡೊನಾಲ್ಡ್ ಟ್ರಂಪ್ ಭಾರತವನ್ನು ‘ಸತ್ತ ಆರ್ಥಿಕತೆ’ (Dead economy) ಎಂದು ಬಣ್ಣಿಸಿದ್ದ ಹೇಳಿಕೆಯನ್ನು ರಾಹುಲ್ ಗಾಂಧಿ ಬೆಂಬಲಿಸಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದಾರೆ. ಅವರ ಸ್ವಂತ ಕಾಂಗ್ರೆಸ್ ಪಕ್ಷದ ನಾಯಕರೇ ರಾಹುಲ್ ಗಾಂಧಿ ಅವರ ಅಭಿಪ್ರಾಯವನ್ನು ವಿರೋಧಿಸಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ಅವರಿಗೆ ಭಾರೀ ಟ್ರೋಲ್‌ಗೆ ಕಾರಣವಾಗಿದೆ.
ರಾಹುಲ್ ಗಾಂಧಿ ಹೇಳಿದ್ದೇನು?
ಸಂಸತ್ ಭವನದ ಹೊರಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, “ಟ್ರಂಪ್ ವಾಸ್ತವವನ್ನು ಹೇಳಿದ್ದಾರೆ. ಭಾರತದ ಆರ್ಥಿಕತೆ ಸತ್ತಿದೆ” ಎಂದಿದ್ದರು. ನಂತರ X (ಹಿಂದಿನ ಟ್ವಿಟರ್) ನಲ್ಲಿಯೂ ಇದೇ ಅಭಿಪ್ರಾಯವನ್ನು ಪುನರುಚ್ಚರಿಸಿ, “ಭಾರತದ ಆರ್ಥಿಕತೆ ಸತ್ತಿದೆ. ಮೋದಿ ಅದನ್ನು ಬಲಿಕೊಟ್ಟಿದ್ದಾರೆ” ಎಂದು ಕುಟುಕಿದ್ದರು. ತಮ್ಮ ಆರೋಪಕ್ಕೆ ಪೂರಕವಾಗಿ ಅವರು ಅದಾನಿ-ಮೋದಿ ಸಹಭಾಗಿತ್ವ, ನೋಟು ಅಮಾನ್ಯೀಕರಣ, ತಪ್ಪು ಜಿಎಸ್‌ಟಿ, ವಿಫಲ ‘ಮೇಕ್ ಇನ್ ಇಂಡಿಯಾ’, ಎಂಎಸ್‌ಎಂಇ ನಾಶ, ರೈತರ ಸಂಕಷ್ಟ ಹಾಗೂ ಭಾರತೀಯ ಯುವಕರಿಗೆ ಉದ್ಯೋಗ ನೀಡದೆ ಅವರ ಭವಿಷ್ಯವನ್ನು ಮೋದಿ ನಾಶ ಮಾಡಿದ್ದಾರೆ ಎಂದು ಹೆಸರಿಸಿದರು.
ಕಾಂಗ್ರೆಸ್ ನಾಯಕರ ಭಿನ್ನಾಭಿಪ್ರಾಯ
ರಾಹುಲ್ ಗಾಂಧಿಯವರ ಹೇಳಿಕೆಗೆ ವಿರುದ್ಧವಾಗಿ, ಇತರ ಹಿರಿಯ ಕಾಂಗ್ರೆಸ್ ನಾಯಕರು ಟ್ರಂಪ್‌ರ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸಂಸದ ರಾಜೀವ್ ಶುಕ್ಲಾ ಅವರು, “ಡೊನಾಲ್ಡ್ ಟ್ರಂಪ್ ಹೇಳಿದ್ದು ಸಂಪೂರ್ಣ ಸುಳ್ಳು. ನಮ್ಮ ಆರ್ಥಿಕತೆ ದುರ್ಬಲವೇ ಅಲ್ಲ. ನಮ್ಮನ್ನು ಆರ್ಥಿಕವಾಗಿ ಮುಗಿಸುತ್ತೇವೆ ಎಂದು ಯಾರಾದರೂ ಹೇಳುತ್ತಿದ್ದರೆ ಅದು ತಪ್ಪು ತಿಳುವಳಿಕೆ. ಟ್ರಂಪ್ ಭ್ರಮೆಯಲ್ಲಿ ಬದುಕುತ್ತಿದ್ದಾರೆ” ಎಂದು ಹೇಳಿದರು.
ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ಟ್ರಂಪ್ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. “ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮಾತುಕತೆ ನಡೆಸಲಾಗುತ್ತಿದೆ. ಭಾರತಕ್ಕೆ ಅನುಕೂಲಕರವಾಗಿ ಒಪ್ಪಂದ ಇರದಿದ್ದರೆ ಅದನ್ನು ಕೈಬಿಡುತ್ತೇವೆ. ಅಮೆರಿಕದ ಬದಲು ಬೇರೆ ಪರ್ಯಾಯ ಮಾರುಕಟ್ಟೆಗಳನ್ನು ಹುಡುಕುತ್ತೇವೆ. ನಮಗೆ ಆಯ್ಕೆಗಳೇ ಇಲ್ಲವೆಂದಿಲ್ಲ” ಎಂದು ಶಶಿ ತರೂರ್ ಸ್ಪಷ್ಟಪಡಿಸಿದರು.
ನೆಟ್ಟಿಗರಿಂದ ರಾಹುಲ್ ಗಾಂಧಿ ಟ್ರೋಲ್
‘ಡೆಡ್ ಎಕಾನಮಿ’ ಎಂದು ಟ್ರಂಪ್ ನೀಡಿದ ಹೇಳಿಕೆಯನ್ನು ಸಮರ್ಥಿಸಿದ ರಾಹುಲ್ ಗಾಂಧಿ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಟ್ರೋಲ್ ಮಾಡಲಾಗುತ್ತಿದೆ. ಒಬ್ಬ ನೆಟ್ಟಿಗರು, “ಸತ್ತ ಆರ್ಥಿಕತೆಗಳು ಶೇ. 6.5ರಷ್ಟು ಬೆಳೆಯುವುದಿಲ್ಲ. ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುವುದಿಲ್ಲ. ಇದನ್ನು ಈ ವ್ಯಕ್ತಿಗೆ ಯಾರಾದರೂ ವಿವರಿಸಿ” ಎಂದು ವ್ಯಂಗ್ಯವಾಡಿದ್ದಾರೆ.








