ಬೆಂಗಳೂರು : ರಾಹುಲ್ ಗಾಂಧಿಯವರೇ ಮೋದಿಯವರನ್ನು ಎದುರಿಸಲು ಇರುವ ರೈಟ್ ಪರ್ಸನ್ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಕೆ.ಹೆಚ್. ಮುನಿಯಪ್ಪ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಹೆಚ್.ಮುನಿಯಪ್ಪ, ಸಿ.ಡಬ್ಲ್ಯು.ಸಿ ಸಭೆಯಲ್ಲಿ ಎಲ್ಲಾ ಸದಸ್ಯರಿಗೂ ಮಾತನಾಡಲು ಅವಕಾಶ ಕಲ್ಪಿಸಿ ಸುಧೀರ್ಘ ಚರ್ಚೆ ನಡೆಸಿದ್ದು ನನ್ನ ಅನುಭವದಲ್ಲಿ ಇದೇ ಮೊದಲು. ಆನಂದ್ ಶರ್ಮಾ, ಮುಕುಲ್ ವಾಸ್ನಿಕ್, ಕಪಿಲ್ ಸಿಬಲ್ ಎಲ್ಲರೂ ಪಕ್ಷನಿಷ್ಠರು. ಅವರ ಉತ್ತರದಲ್ಲೂ ಎಲ್ಲರೂ ಪಕ್ಷನಿಷ್ಠೆ ತೋರಿದ್ದಾರೆ. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಯಾರೂ ಸಹ ಸೋನಿಯಾ ಗಾಂಧಿಯವರ ನಾಯಕತ್ವದ ಪ್ರಶ್ನಿಸಿಲ್ಲ ಎಂದು ತಿಳಿಸಿದ್ದಾರೆ.
ಸೋನಿಯಾ ಗಾಂಧಿ ಅವರು ಪಕ್ಷದ ತಾಯಿಯ ಸ್ಥಾನದಲ್ಲಿದ್ದಾರೆ. ಅವರೇ ನಿನ್ನೆ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದಿದ್ದಾರೆ. ಪಕ್ಷ ಎಂದ ಮೇಲೆ ಅಡೆತಡೆಗಳು ಬರೋದು ಸಹಜ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ಸ್ವತಃ ಸೋನಿಯಾ ಗಾಂಧಿ ಪ್ರಧಾನಿ ಸ್ಥಾನ ತ್ಯಾಗ ಮಾಡಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದರು. ಪಕ್ಷ ಕಟ್ಟಲು ಸೋನಿಯಾ ಗಾಂಧಿ ಶ್ರಮಿಸಿದ್ದಾರೆ ಎಂದರು.
ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಭಾರತದ ಸ್ಥಿತಿ ಹದಗೆಟ್ಟಿದೆ. ಜಿ.ಡಿ.ಪಿ. ನೆಲಕಚ್ಚಿದೆ. ನಿರುದ್ಯೋಗಿಗಳಿಗೆ ಕೇಂದ್ರ ಸರ್ಕಾರ ಉದ್ಯೋಗ ನೀಡಿಲ್ಲ, ಮೋದಿ ಬಂದ ಮೇಲೆ ದೇಶ ಉದ್ಧಾರ ಆಗಿದೆ ಎಂಬಂತೆ ಮಾದ್ಯಮಗಳಲ್ಲಿ ಬಿಂಬಿತವಾಗುತ್ತಿದೆ. ವಾಜಪೇಯಿ ಅಧಿಕಾರದಲ್ಲಿದ್ದಾಗಲೂ ಈ ಸ್ಥಿತಿ ಇರಲಿಲ್ಲ. ಹೀಗಾದರೆ ಈ ದೇಶದ ಗತಿ ಏನಾಗಬೇಕು ಎಂದು ಪ್ರಶ್ನಿಸಿದ್ದಾರೆ.









