ನವದೆಹಲಿ : ರಾಹುಲ್, ಪ್ರಿಯಾಂಕಾ ಅಲ್ಲ. ಯಾರಿಗೆ ಎಐಸಿಸಿ ಅಧ್ಯಕ್ಷ ಪಟ್ಟ..? ಸದ್ಯ ಕಾಂಗ್ರೆಸ್ ಕಲಿಗಳೂ ಸೇರಿದಂತೆ ಎಲ್ಲರಲ್ಲೂ ಮೂಡಿರುವ ಪ್ರಶ್ನೆ ಇದು. ಎಐಸಿಸಿ ಸಾರಥ್ಯದ ವಿಷಯ ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ನಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ನಾಯಕತ್ವ ಬದಲಾವಣೆ ಬಗ್ಗೆ ಪಕ್ಷದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದ್ದು, ಇಂದು ಕಾಂಗ್ರೆಸ್ ಕಾರ್ಯಕಾರಿಣಿ (ಸಿಡಬ್ಲ್ಯುಸಿ) ಸಭೆಯಲ್ಲಿ ಕೈಗೊಳ್ಳುವ ಅಂತಿಮ ನಿರ್ಧಾರ ಭಾರೀ ಕುತೂಹಲ ಕೆರಳಿಸಿದೆ.
ಅಧ್ಯಕ್ಷ ಸ್ಥಾನ ವಹಿಸಲು ರಾಹುಲ್ ನಕಾರ
ಹಿರಿಯ ನಾಯಕರನ್ನೇ ಒಳಗೊಂಡಿರುವ ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ ಸದ್ಯದ ಪರಿಸ್ಥಿತಿಯ ಕ್ರಿಯಾಶೀಲ ನಾಯಕ. ಹೀಗಾಗಿ ಅವರೇ ಮತ್ತೆ ಪಕ್ಷದ ಸಾರಥ್ಯ ವಹಿಸಬೇಕೆಂದು ಒಂದು ಬಣ ಬಿಗಿ ಪಟ್ಟು ಹಿಡಿದಿದೆ. ಆದ್ರೆ ರಾಹುಲ್ ಈ ಅತ್ಯುನ್ನತ ಹುದ್ದೆ ವಹಿಸಿಕೊಳ್ಳಲು ನಿರಾಕರಿಸಿದ್ದಾರೆ. 2019ರ ಲೋಕಕದನದಲ್ಲಿ ಸೋಲುಂಡ ಬಳಿಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಹುಲ್, ಮತ್ತೆ ಎಐಸಿಸಿ ಅಧ್ಯಕ್ಷರಾಗಲು ಮನಸ್ಸು ಮಾಡುತ್ತಿಲ್ಲ.
ಗಾಂಧಿ ಕುಟುಂಬಕ್ಕೆ ಸೇರಿಲ್ಲದವರು ಅಧ್ಯಕ್ಷರಾಗಲಿ
ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ನ ತಾರಾ ಆಕರ್ಷಣೆ. ಜ್ಯೂ. ಇಂದಿರಾ ಎಂದೇ ಕರೆಯಲ್ಪಡುವ ಯುವ ನಾಯಕಿ. ಕೆಲ ಕಾಂಗ್ರೆಸ್ ನಾಯಕರು ಪ್ರಿಯಾಂಕಾ ಗಾಂಧಿ ನಾಯಕತ್ವಕ್ಕೆ ಒತ್ತಾಯಿಸಿದ್ದಾರೆ. ಆದ್ರೆ ಜ್ಯೂ. ಇಂದಿರಾ, ಕಾಂಗ್ರೆಸ್ ಅಧ್ಯಕ್ಷೆಯಾಗಬೇಕೆಂಬ ಕೆಲವು ಮುಖಂಡರ ಸಲಹೆಯನ್ನು ಸೌಜನ್ಯವಾಗಿಯೇ ತಿರಸ್ಕರಿಸಿದ್ದಾರೆ. ಗಾಂಧಿ ಕುಟುಂಬಕ್ಕೆ ಸೇರಿಲ್ಲದವರು ಕಾಂಗ್ರೆಸ್ ಅಧ್ಯಕ್ಷರಾಗಲಿ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಇನ್ನು ಎಐಸಿಸಿ ಅಧಿನಾಯಕಿ ಸ್ಥಾನ ತ್ಯಜಿಸಲು ಸೋನಿಯಾ ಒಲವು ತೋರಿದ್ದು, ಸಾಮೂಹಿಕ ನಾಯಕತ್ವದ ಪರ ಧ್ವನಿ ಎತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಹಿನ್ನಲೆಯಲ್ಲಿ ಇಂದಿನ ಸಿಡಬ್ಲ್ಯುಸಿ ಸಭೆ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದ್ದು,ಗಾಂಧಿ ಕುಟುಂಬೇತರ ನಾಯಕರೊಬ್ಬರು ಪಕ್ಷದ ಸಾರಥ್ಯ ವಹಿಸುವ ಸಾಧ್ಯತೆ ಇದೆ. ಇಂದು ಸಂಜೆ ವೇಳೆ ಈ ಪ್ರಶ್ನೆಗಳಿಗೆ ಉತ್ತರ ಲಭಿಸಲಿದೆ.
ಇನ್ನು ಅಧ್ಯಕ್ಷ ಸ್ಥಾನಕ್ಕೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಮಲ್ಲಿಕಾರ್ಜುನ ಖರ್ಗೆ, ಮುಕುಲ್ ವಾಸ್ನಿಕ್, ಶಶಿ ತರೂರ್, ಸುಶೀಲ್ ಕುಮಾರ್ ಸಿಂಧೆ ಸೇರಿದಂತೆ ಹಲವು ಹೆಸರುಗಳು ಚಾಲ್ತಿಯಲ್ಲಿದೆ.









