ದೆಹಲಿ : ಚಬಹಾರ್-ಜಹೇದಾನ್ ರೈಲು ಯೋಜನೆಯಿಂದ ಭಾರತವನ್ನು ಇರಾನ್ ತೆಗೆದುಹಾಕಿದೆ ಎಂದು ವರದಿಯಾಗಿದೆ. ಅಲ್ಲದೆ ಇರಾನ್ ಅಮೆರಿಕಾ ಹಾಗೂ ಭಾರತಕ್ಕೆ ಶತ್ರುವಾಗಿರುವ ಚೀನಾ ಜೊತೆಗೆ 400 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ವಿರುದ್ಧ ಕಿಡಿಕಾರಿದ್ದಾರೆ.
ರಾಹುಲ್ ತಮ್ಮ ಟ್ವೀಟ್ ನಲ್ಲಿ ಚಬಹಾರ್ ರೈಲು ಯೋಜನೆಯಿಂದ ಭಾರತವನ್ನು ಇರಾನ್ ಕೈಬಿಟ್ಟಿದೆ ಎಂಬ ವರದಿಯನ್ನು ಉಲ್ಲೇಖಿಸಿ ”ಭಾರತ ಎಲ್ಲೆಡೆ ಅಧಿಕಾರ ಮತ್ತು ಗೌರವ ಕಳೆದುಕೊಳ್ಳುತ್ತಿದೆ’ ಎಂದು ಬರೆದುಕೊಂಡಿದ್ದಾರೆ.
ಆದರೆ, ಭಾರತಕ್ಕೆ ಇರಾನ್ ಕೈ ಕೊಟ್ಟಿರುವ ಈ ಸುದ್ದಿಯನ್ನು ಭಾರತ ವಿದೇಶಾಂಗ ಕಚೇರಿ ನಿರಾಕರಿಸಿದ್ದು, ಭಾರತ ಈ ಯೋಜನೆಯಿಂದ ಹಿಂದೆ ಸರಿದಿದೆ ಎನ್ನುವುದು ಕೇವಲ ವದಂತಿ’ ಎಂದಿದೆ.







