ಕೋಲ್ಕತ್ತ : ರೈಲ್ವೇ ಇಲಾಖೆ ಶ್ರಮಿಕ್ ವಿಶೇಷ ರೈಲು ಓಡಿಸುತ್ತಿಲ್ಲ, ಕೊರೊನಾ ಎಕ್ಸ್ ಪ್ರೆಸ್ ರೈಲು ಓಡಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರೈಲ್ವೆ ಇಲಾಖೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರವು ಶ್ರಮಿಕ್ ವಿಶೇಷ ರೈಲು ಪ್ರಯಾಣ ಪ್ರಾರಂಭಿಸಿದೆ. ಇದು ಈಗ ಪಶ್ಚಿಮ ಬಂಗಾಳಕ್ಕೆ ಕಂಟಕವಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಲಸೆ ಕಾರ್ಮಿಕರನ್ನು ತವರಿಗೆ ಕಳುಹಿಸಲು ಹೆಚ್ಚಿನ ರೈಲ್ವೇ ವ್ಯವಸ್ಥೆ ಮಾಡಬೇಕಿತ್ತು. ಆದರೆ ರೈಲ್ವೇ ಇಲಾಖೆ ಒಂದೇ ರೈಲಿನಲ್ಲಿ ಹೆಚ್ಚು ಕಾರ್ಮಿಕರನ್ನು ತುಂಬಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ರೈಲ್ವೇ ಇಲಾಖೆ ಶ್ರಮಿಕ್ ವಿಶೇಷ ರೈಲು ಓಡಿಸುತ್ತಿಲ್ಲ, ಕೊರೊನಾ ಎಕ್ಸ್ ಪ್ರೆಸ್ ರೈಲು ಓಡಿಸುತ್ತಿದೆ. ಸಾವಿರಾರು ವಲಸೆ ಕಾರ್ಮಿಕರನ್ನು ಒಂದೇ ರೈಲಿನಲ್ಲಿ ಕಳುಹಿಸುವದರಿಂದ ಕೊರೊನಾ ಸೋಂಕು ಹೆಚ್ಚುವ ಸಾಧ್ಯತೆ ಇರುತ್ತದೆ. ವಲಸೆ ಕಾರ್ಮಿಕರಿಗೆ ಯಾಕೆ ಹೆಚ್ಚಿನ ರೈಲುಗಳ ವ್ಯವಸ್ಥೆ ಏಕೆ ಮಾಡುತ್ತಿಲ್ಲ ಎಂದು ಮಮತಾ ಬ್ಯಾನರ್ಜಿ ಕೇಂದ್ರ ರೈಲ್ವೇ ಇಲಾಖೆಯನ್ನು ಪ್ರಶ್ನಿಸಿದ್ದಾರೆ.








