ಬೆಂಗಳೂರು, ಜೂನ್ 7: ನಗರದ ನಿಗದಿತ ವಲಯವಾರು ಪ್ರದೇಶಕ್ಕೆ ಅನ್ವಯವಾಗುವ ಮಳೆ ಸೇರಿದಂತೆ ಹವಾಮಾನ ಮುನ್ಸೂಚನೆ ನೀಡುವ ‘ ಮೇಘ ಸಂದೇಶ ‘ ಎಂಬ ಮೊಬೈಲ್ ಆ್ಯಪ್ ಹಾಗೂ ‘ ವರುಣ ಮಿತ್ರ ‘ ಎಂಬ ವೆಬ್ ಸೈಟ್ ನ್ನು ರಾಜ್ಯ ಸರ್ಕಾರ ಇಂದು ಬಿಡುಗಡೆ ಮಾಡಿದೆ.
ಬೆಂಗಳೂರು ಉತ್ತರ ಯಲಹಂಕ ತಾಲ್ಲೂಕಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಮತ್ತು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಆ್ಯಪ್ ಮತ್ತು ವೆಬ್‌ಸೈಟ್ ಅನ್ನು ಲೋಕಾರ್ಪಣೆ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ಇತ್ತೀಚಿನ ವರ್ಷಗಳಲ್ಲಿ ಪ್ರಪಂಚದಾದ್ಯಂತ ನೈಸರ್ಗಿಕ ವಿಕೋಪಗಳು ಆಗಾಗ್ಗೆ ಸಂಭವಿಸುತ್ತಿದ್ದು, ಈ ನೈಸರ್ಗಿಕ ವಿಕೋಪಗಳಲ್ಲಿ ನಗರ ಪ್ರವಾಹವೂ ಒಂದು. ಪ್ರತಿ ಮಳೆಗಾಲದಲ್ಲೂ ಪ್ರವಾಹ ಪರಿಸ್ಥಿತಿ ಮರುಕಳಿಸುತ್ತಿರುವುದನ್ನು ಕಾಣಬಹುದಾಗಿದೆ. ಬೆಂಗಳೂರು ನಗರದ ಸೇರಿದಂತೆ ಹಲವು ಪ್ರದೇಶದ ಮಳೆ ಮುನ್ಸೂಚನೆ, ಪ್ರವಾಹ ಮುನ್ನೆಚ್ಚರಿಕೆಗಳನ್ನು ನೀಡಲು ಈ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದ್ದು ಜನರು ತಾವು ಹೋಗುವ ಸ್ಥಳದಲ್ಲಿ ಮಳೆ ಬರಲಿದೆಯೇ ಅಥವಾ ಹವಾಮಾನ ಹೇಗಿದೆ ಎಂಬುದನ್ನು ಖಚಿತಪಡಿಸಿಕೊಂಡು ಹೊರಗೆ ಹೋಗಬಹುದಾಗಿದೆ ಎಂದರು.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ, ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿವೆ.
ಬೆಂಗಳೂರು ನಗರದ ಸೇರಿದಂತೆ ಹಲವು ಪ್ರದೇಶಕ್ಕೆ ಅನ್ವಯವಾಗುವ ಮಳೆ ಮುನ್ಸೂಚನೆ, ಪ್ರವಾಹ ಮುನ್ನೆಚ್ಚರಿಕೆಗಳು ಮುಂತಾದ ಮಾಹಿತಿಯನ್ನು www.varunamitra.kar.gov.in ಮೂಲಕವೂ ನೀಡಲಾಗುತ್ತದೆ. ಮೇಘ ಸಂದೇಶ ಆ್ಯಪ್ ಅನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಎರಡಕ್ಕೂ ಅನುವಾಗುವಂತೆ ವಿನ್ಯಾಸಗೊಳಿಸಲಾಗಿದ್ದು ಇದನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ನಿಂದ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.








