ಹುಬ್ಬಳ್ಳಿ – ಧಾರವಾಡ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದೆರೆಡು ದಿನಗಳಿಂದ ವರುಣ ರಾಯ ಅಬ್ಬರಿಸುತ್ತಿದ್ದು, ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ ವರ್ಷದ ಪ್ರವಾಹದ ಭೀತಿ ಇದೀಗ ಮತ್ತೊಮ್ಮೆ ಎದುರಾಗಿದೆ. ಮಹಾಮಳೆಗೆ ಗಂಗಾವಳಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದ ಜನರಲ್ಲಿ ಮತ್ತೆ ನಡುಕ ಸೃಷ್ಟಿಯಾಗಿದೆ.
ವರುಣನ ಆರ್ಭಟಕ್ಕೆ ಗಂಗಾವಳಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ತೀರದ ಹಳ್ಳಿಗಳಿಗೆ ಮುಳುಗಡೆ ಭೀತಿ ಎದುರಾಗಿದೆ. ಇತ್ತ ನದಿ ಪಾತ್ರದ ಜನರೆಲ್ಲರೂ ನೆರೆ ಭೀತಿಯಿಂದಾಗಿ ತಮ್ಮ ಮನೆಗಳಿಂದ ಸುರಕ್ಷಿತ ಜಾಗಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಅಂಕೋಲಾ ತಾಲೂಕಿನ ಸುಂಕಸಾಳ,ರಾಮನಗುಳಿ, ಡೋಂಗ್ರಿ,ಹೆಗ್ಗಾರ, ವೈದ್ಯ ಹೆಗ್ಗಾರ ವ್ಯಾಪ್ತಿಯ ನಿವಾಸಿಗಳು ಸ್ಥಳಾಂತರ ಗೊಂಡಿದ್ದಾರೆ.
ಧಾರಾಕಾರ ಮಳೆಯಿಂದಾಗಿ ನದಿಯಲ್ಲಿ ಹರಿವು ಹೆಚ್ಚಾಗಿ ಸೇತುವೆ ಮೇಲೆ ನೀರು ಹರಿದಿದ್ದು, ಹೆಗ್ಗಾರ್ ಮತ್ತು ಶೇವ್ಕಾರ್ ನಡುವಿನ ಸಂಪರ್ಕ ಕಡಿತಗೊಂಡಿದೆ. ಮತ್ತೊಂದೆಡೆ ಗುಳ್ಳಾಪುರ ಸೇತುವೆ ಬಳಿ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಬೈಕ್ ಸವಾರನೋರ್ವ ಬೈಕ್ ಸಮೇಕ ಕೊಚ್ಚಿಕೊಂಡು ಹೋದ ಘಟನೆ ನಡೆದಿದೆ. ಬೈಕ್ ಸವಾರನನ್ನು ಸಂತೋಷ್ ನಾಯಕ್ ಹೊನ್ನಾವರ ಎಂದು ಗುರುತಿಸಲಾಗಿದೆ.
ಕಳೆದ ವರ್ಷದ ಭೀಕರ ಪ್ರವಾಹದ ಕಹಿ ನೆನಪು ಮಾಸುವಷ್ಟರಲ್ಲೇ ಮತ್ತೊಮ್ಮೆ ಅಂತಹದ್ದೇ ಭೀಭತ್ಸ್ಯ ದೃಷ್ಯ ಮರುಕಳಿಸುವ ಲಕ್ಷಣಗಳು ಗೋಚರಿಸುತ್ತವೆ. ಕಳೆದ ವರ್ಷ ಸೃಷ್ಟಿಯಾಗಿದ್ದ ನೆರೆ ಈಗಾಗಲೂ ಜನರನ್ನು ಬೆಚ್ಚಿ ಬೀಳಿಸುತ್ತೆ. ಅಲ್ಲಲ್ಲಿ ಬೆಟ್ಟ ಗುಡ್ಡ ಕುಸಿತ, ಸಾವಿರಾರು ಮನರಗಳಿಗೆ ಹಾನಿಯಾಗಿ, ಸೂರು ಕಳೆದುಕೊಂಡು ಜನರು ಗಂಜಿ ಕೇಂದ್ರಗಳ ಮೊರೆ ಹೋಗಿದ್ದರು. ಪ್ರವಾಹದಿಂದಾಗಿ ಅನಾರೋಗಿಗಳು ಪರದಾಡುವಂತಾಗಿತ್ತು. ಆಶ್ರಯಕ್ಕೆ ಗಂಜಿಕೇಂದ್ರಗಳು ಸಾಲದಂತಾಗಿತ್ತು. ಪ್ರವಾಹದಲ್ಲಿ ಅದೆಷ್ಟೋ ಜನರು ಜೀವಕಳೆದುಕೊಂಡು ಹದಗೆಟ್ಟ ರಸ್ತೆಗಳಲ್ಲಿ ಮೃತದೇಹಗಳನ್ನು ಸಾಗಿಸುವುದೇ ಸವಾಲಾಗಿ ಪರಿಣಮಸಿತ್ತು. ಇದೆಲ್ಲಾ ಭೀಕರತೆ ನಡುವೆ ಪ್ರವಾಹ ಕೊಂಚ ಕಡಿಮೆಯಾಗುತ್ತಿದ್ದಂತೆ ಜನರೆಲ್ಲಾ ತಮ್ಮ ತಮ್ಮ ಮನೆಗಳತ್ತ ವಾಪಸ್ ಆಗಿ ಸಹಜ ಜೀವನದತ್ತ ಮರಳುವಷ್ಟರಲ್ಲೇ ಮತ್ತದೇ ಪ್ರವಾಹದ ಆತಂಕ ಜನರಲ್ಲಿ ಮನೆ ಮಾಡಿದೆ.








