ಇಂಗ್ಲೆಂಡ್ -ವಿಂಡೀಸ್ 2ನೇ ಟೆಸ್ಟ್ – ಮೂರನೇ ದಿನ ಮಳೆಯದ್ದೇ ಆಟ..!
ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದ ಆಟ ಮಳೆಗೆ ಆಹುತಿಯಾಗಿದೆ. ಮ್ಯಾಂಚೆಸ್ಟರ್ ನಲ್ಲಿ ಸುರಿದ ಮಳೆಯಿಂದಾಗಿ ಉಭಯ ತಂಡಗಳ ಆಟಗಾರರು ಡ್ರೆಸಿಂಗ್ ರೂಂಗೆ ಸೀಮಿತಗೊಳ್ಳಬೇಕಾಗಿತ್ತು. ಪಂದ್ಯ ಆರಂಭಕ್ಕೆ ಮುನ್ನವೇ ಮಳೆರಾಯ ಅಡ್ಡಿಪಡಿಸಬಹುದು
ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.
ಅಂದ ಹಾಗೇ ಇಂಗ್ಲೆಂಡ್ ತಂಡಕ್ಕೆ ಈ ಪಂದ್ಯ ಹೆಚ್ಚು ಮಹತ್ವದ್ದಾಗಿತ್ತು. ಪಂದ್ಯವನ್ನು ಗೆಲ್ಲಲೇಬೇಕು ಎಂಬ ಹಠದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಸವಾಲೇ ಮುಂದಿದೆ. ಯಾಕಂದ್ರೆ ಇಂಗ್ಲೆಂಡ್ ತಂಡ 2ನೇ ಟೆಸ್ಟ್ ಪಂದ್ಯವನ್ನು ಗೆಲ್ಲಬೇಕಾದ್ರೆ 19 ವಿಕೆಟ್‍ಗಳನ್ನು ಕಬಳಿಸಬೇಕು. ಆದ್ರೆ ಉಳಿದಿರುವುದು ಎರಡು ದಿನ ಮಾತ್ರ. ಅದೂ ಅಲ್ಲದೆ ಮುಂದಿನ ಎರಡೂ ದಿನದ ಆಟ ನಡೆಯುತ್ತೆ ಎಂದು ಹೇಳೋಕೆ ಆಗಲ್ಲ. ಮತ್ತೆ ಮಳೆ ಅಡ್ಡಿಪಡಿಸುವ ಸಾಧ್ಯತೆಯೂ ಇತ್ತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 469 ರನ್ ಗಳಿಸಿ ಮೊದಲ ಇನಿಂಗ್ಸ್ ಅನ್ನು ಡಿಕ್ಲೇರ್ ಮಾಡಿತ್ತು. ಬೆನ್ ಸ್ಟೋಕ್ಸ್ 176 ರನ್ ಮತ್ತು ಡಾಮಿನಿಕ್ ಸಿಬ್ಲೇಯ್ 120 ರನ್ ದಾಖಲಿಸಿದ್ರು. ಇಂಗ್ಲೆಂಡ್ ಸವಾಲನ್ನು ಬೆನ್ನಟ್ಟಿದ್ದ ವೆಸ್ಟ್ ಇಂಡೀಸ್ ಎರಡನೇ ದಿನದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 32 ರನ್ ಗಳಿಸಿತ್ತು. ಇದೀಗ ಮೂರನೇ ದಿನದ ಆಟ ನಡೆಯಲಿಲ್ಲ. ಹೀಗಾಗಿ ನಾಲ್ಕನೇ ದಿನ ವೆಸ್ಟ್ ಇಂಡೀಸ್ ಯಾವ ರೀತಿ ಇಂಗ್ಲೆಂಡ್ ದಾಳಿ ಉತ್ತರ ನೀಡುತ್ತೆ ಎಂಬುದನ್ನು ನೋಡಬೇಕಿದೆ.








