ಜುಲೈ ತಿಂಗಳಲ್ಲಿ ಶೇಕಡಾ 10 ರಷ್ಟು ಮಳೆಯ ಕೊರತೆ
ಹೊಸದಿಲ್ಲಿ, ಅಗಸ್ಟ್ 1: ಜುಲೈ ತಿಂಗಳು ಶೇಕಡಾ 10 ರಷ್ಟು ಮಳೆಯ ಕೊರತೆಯೊಂದಿಗೆ ಕೊನೆಗೊಂಡಿದೆ. ಆದರೆ ನಾಲ್ಕು ತಿಂಗಳ ಮಳೆಗಾಲದ ದ್ವಿತೀಯಾರ್ಧದಲ್ಲಿ ಮಾನ್ಸೂನ್ ಸಾಮಾನ್ಯವಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ತಿಳಿಸಿದೆ.
ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೋಹಪಾತ್ರ ಮಾತನಾಡಿ, ಜುಲೈ ತಿಂಗಳು ಶೇಕಡಾ 10 ರಷ್ಟು ಮಳೆಯ ಕೊರತೆಯೊಂದಿಗೆ ಕೊನೆಗೊಂಡಿದೆ, ಹೆಚ್ಚಾಗಿ ಉತ್ತರ ಮತ್ತು ಮಧ್ಯ ಭಾರತದ ಕೆಲವು ಭಾಗಗಳಲ್ಲಿ ಕಡಿಮೆ ಮಳೆಯಾಗಿದೆ.
ಜುಲೈನಲ್ಲಿ ಸಾಮಾನ್ಯ ವಿಭಾಗದಲ್ಲಿ ಬರುವ ದೀರ್ಘಾವಧಿಯ ಸರಾಸರಿ (ಎಲ್ಪಿಎ) ಯ ಶೇಕಡಾ 103 ರಷ್ಟು ಮಳೆಯಾಗುತ್ತದೆ ಎಂದು ಐಎಂಡಿ ಊಹಿಸಿತ್ತು. ಜೂನ್‌ನಲ್ಲಿ ಸಾಮಾನ್ಯಕ್ಕಿಂತ ಶೇಕಡಾ 17 ರಷ್ಟು ಹೆಚ್ಚಿನ ಮಳೆಯಾಗಿದೆ.
2020 ರ ನೈರುತ್ಯ ಮಾನ್ಸೂನ್‌ನ ದ್ವಿತೀಯಾರ್ಧದಲ್ಲಿ (ಆಗಸ್ಟ್-ಸೆಪ್ಟೆಂಬರ್) ಮಳೆಗಾಗಿನ ದೀರ್ಘ ವ್ಯಾಪ್ತಿಯ ಮುನ್ಸೂಚನೆಯಲ್ಲಿ, ಐಎಂಡಿ ಆಗಸ್ಟ್‌ನಲ್ಲಿ ಎಲ್’ಪಿಎಯ ಶೇಕಡಾ 97 ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
96-104 ರಷ್ಟು ಎಲ್‌ಪಿಎ ವ್ಯಾಪ್ತಿಯಲ್ಲಿ ಮಾನ್ಸೂನ್ ಅನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ದೇಶದಲ್ಲಿ ಅಧಿಕೃತ ಮಳೆಗಾಲ ಜೂನ್ 1 ರಿಂದ ಸೆಪ್ಟೆಂಬರ್ 30 ರವರೆಗೆ ಇರುತ್ತದೆ.
ಕೇರಳದಲ್ಲಿ ಮಾನ್ಸೂನ್ ಆರಂಭವು ಜೂನ್ 1 ರಂದು ಮತ್ತು ಜುಲೈ 31 ರವರೆಗೆ ದೇಶದಲ್ಲಿ ಸಾಮಾನ್ಯ ಮಳೆಯಾಗಿದೆ.
ವಾಯುವ್ಯ ವಿಭಾಗದಲ್ಲಿ ಶೇಕಡಾ 18 ರಷ್ಟು ಮಳೆಯ ಕೊರತೆಯಾಗಿದೆ. ಇದು ರಾಜಸ್ಥಾನ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಪಂಜಾಬ್, ಹರಿಯಾಣ ಮತ್ತು ಚಂಡೀಗಢ, ದೆಹಲಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಕೇಂದ್ರ ಪ್ರದೇಶಗಳನ್ನು ಒಳಗೊಂಡಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಕ್‌ನಲ್ಲಿನ ಕೊರತೆ ಕ್ರಮವಾಗಿ 49 ಮತ್ತು 61 ಆಗಿದೆ. ದೆಹಲಿಯಲ್ಲೂ ಶೇ 24 ರಷ್ಟು ಕೊರತೆ ದಾಖಲಾಗಿದೆ.
ಪೂರ್ವ ರಾಜಸ್ಥಾನ, ಮಧ್ಯಪ್ರದೇಶ, ಪಶ್ಚಿಮ ಉತ್ತರ ಪ್ರದೇಶ, ಗುಜರಾತ್, ಛತ್ತೀಸ್‌ಗಡ, ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ಹಲವಾರು ಭಾಗಗಳಲ್ಲಿ ಕಡಿಮೆ ಮಳೆಯಾಗಿದೆ.
ಐಎಂಡಿಯು ದಕ್ಷಿಣ ಪರ್ಯಾಯ ದ್ವೀಪ ಹವಾಮಾನ ವಿಭಾಗದಲ್ಲಿ ಸಾಮಾನ್ಯಕ್ಕಿಂತ ಶೇಕಡಾ 12 ರಷ್ಟು ಹೆಚ್ಚಿನ ಮಳೆಯಾಗಿದೆ ಎಂದು ತಿಳಿಸಿದೆ. ಈ ವಿಭಾಗವು ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಕೇರಳ, ಕರ್ನಾಟಕ ಮತ್ತು ಕೇಂದ್ರ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ ಮತ್ತು ಪುದುಚೇರಿಗಳನ್ನು ಒಳಗೊಂಡಿದೆ. ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಪುದುಚೇರಿಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಕೇರಳದಲ್ಲಿ ಮಳೆಯ ಕೊರತೆಯಾಗಿದೆ.
ಪೂರ್ವ ಮತ್ತು ಈಶಾನ್ಯ ಭಾರತ ವಿಭಾಗದಲ್ಲೂ ಶೇ 12 ರಷ್ಟು ಹೆಚ್ಚು ಮಳೆಯಾಗಿದೆ. ವಿಭಾಗವು ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ಮತ್ತು ಈಶಾನ್ಯ ರಾಜ್ಯಗಳನ್ನು ಒಳಗೊಂಡಿದೆ. ಮೇಘಾಲಯ ಮತ್ತು ಬಿಹಾರದಲ್ಲಿ ಹೆಚ್ಚಿನ ಮಳೆಯಾಗಿದೆ. ಆದರೆ, ನಾಗಾಲ್ಯಾಂಡ್, ಮಣಿಪುರ ಮತ್ತು ಮಿಜೋರಾಂನಲ್ಲಿ ಮಳೆ ಕೊರತೆಯಾಗಿದೆ.