3ನೇ ಅಲೆ ಹರಡದಂತೆ ಜನರಲ್ಲಿ ಜಾಗೃತಿ ಮೂಡಿಸಿ: ತಹಶೀಲ್ದಾರ್ ರೂಪ ಕರೆ
ಮಂಡ್ಯ: ಕೊರೊನಾ 3ನೇ ಅಲೆ ಬಹಳಷ್ಟು ವೇಗವಾಗಿ ಹರಡುತ್ತಿದ್ದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯ ಕೆ. ಆರ್. ಪೇಟೆ ತಾಲೂಕಿನಲ್ಲಿ, ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೋನಾ ಮಹಾಮಾರಿಯ 3ನೇ ಅಲೆಯನ್ನು ನಿಯಂತ್ರಣ ಮಾಡಲು ಸಮಾಜದ ಎಲ್ಲ ನಾಗರಿಕರೂ ಮುಂದಾಗಬೇಕು ಎಂದು ಪುರಸಭೆಯ ಸ್ವರ್ಣಜಯಂತಿ ಶಹರಿ ರೋಜ್ಗಾರ್ ಯೋಜನಾ ಭವನದಲ್ಲಿ ನಡೆದ ಆಶಾ, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತೆಯರ ಸಭೆಯಲ್ಲಿ ತಹಶೀಲ್ದಾರ್ ರೂಪ ಕರೆ ನೀಡಿದರು .
ಜನರು ಮಾಸ್ಕುಗಳನ್ನು ಧರಿಸಬೇಕು. ಗುಂಪು ಸೇರದೇ ಕೊರೊನಾ ನಿಯಮಗಳನ್ನು ಪಾಲಿಸುವ ದಿಕ್ಕಿನಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು. ಜ್ವರ, ಕೆಮ್ಮು, ಶೀಥ, ನೆಗಡಿಯಿಂದ ಬಳಲುತ್ತಿರುವ ವ್ಯಕ್ತಿಗಳು ಕಂಡುಬಂದರೆ ಅವರನ್ನು ಕೂಡಲೇ ಕೋವಿಡ್ ಪರೀಕ್ಷೆಗೆ ಒಳಪಡಿಸಿ ಸೋಂಕು ಧೃಡಪಟ್ಟರೆ ಕೋವಿಡ್ ಹೆಲ್ತ್ ಕೇರ್ ಸೆಂಟರ್ ಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಬೇಕು ಎಂದು ಹೇಳಿದರು.
ವೀಕೆಂಡ್ ಕರ್ಫ್ಯೂವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ದಿಕ್ಕಿನಲ್ಲಿ ಜನಜಾಗೃತಿ ಮೂಡಿಸಿ ಯಾರೊಬ್ಬರೂ ಅನಗತ್ಯವಾಗಿ ಮನೆಯಿಂದ ಹೊರಗಡೆ ಓಡಾಡದಂತೆ ಎಚ್ಚರಿಸಬೇಕು ಎಂದು ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆ.ಆರ್.ಪೇಟೆ ಪಟ್ಟಣ ಠಾಣೆಯ ಪೋಲಿಸ್ ಇನ್ಸ್ ಪೆಕ್ಟರ್ ಎಂ.ಕೆ.ದೀಪಕ್, ಪುರಸಭೆ ಮುಖ್ಯಾಧಿಕಾರಿ ಕುಮಾರ್, ತಾಲೂಕು ಸಮಾಜಕಲ್ಯಾಣಾಧಿಕಾರಿ ಮಹೇಶ್, ಪರಿಸರ ಎಂಜಿನಿಯರ್ ಅರ್ಚನಾ ಆರಾಧ್ಯ ಮತ್ತಿತರರು ಭಾಗವಹಿಸಿದ್ದರು









