ಬೆಂಗಳೂರು : ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಹಾಗಾಗಿ ಲಾಕ್ ಡೌನ್ ಮಾಡುವ ವಿಚಾರದಲ್ಲಿ ಕ್ಷಣದಿಂದ ಕ್ಷಣಕ್ಕೆ ಆತಂಕ ಹೆಚ್ಚಾಗುತ್ತಿದೆ. ಈ ನಡುವೆ ಸಾರ್ವಜನಿಕರು ಸಹಕರಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೀವ್ರವಾಗಿ ಹರಡುತ್ತಿರುವ ಕೋವಿಡ್ ಸೋಂಕು ಮುಂದಿನ ಹಂತಗಳಲ್ಲಿ ಹರಡದಂತೆ ತಡೆಯಲು ಹೋಮ್ ಕ್ವಾರಂಟೈನ್ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿ ಕಡ್ಡಾಯಗೊಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಈ ನಿಯಮಗಳ ಪಾಲನೆಯ ಮೇಲ್ವಿಚಾರಣೆ ನಡೆಸಲು ಸ್ವಯಂ ಸೇವಕರಾಗಿ ನೀವೂ ಸಹ ಕಾರ್ಯ ನಿರ್ವಹಿಸಬಹುದು. ಹಾಗಾಗಿ, ಸರ್ಕಾರದ ಹೋರಾಟದೊಂದಿಗೆ ಜತೆಯಾಗಲು ಸ್ವಯಂಪ್ರೇರಿತರಾಗಿ ನೋಂದಾಯಿಸಿಕೊಳ್ಳುವ ಮೂಲಕ ಸೋಂಕು ನಿಯಂತ್ರಿಸುವ ಕೆಲಸದಲ್ಲಿ ಕೈಜೋಡಿಸಬಹುದು.
ಬಿಬಿಎಂಪಿಯ ನಾಗರಿಕ ಕ್ವಾರಂಟೈನ್ ಸ್ಕ್ವಾಡ್ ಸದಸ್ಯರಾಗಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಕೆಳಗಿನ ಲಿಂಕ್ ನಲ್ಲಿ ದಾಖಲಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದು ಹೇಳಿದರು.








