ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗಿದೆ. ಹಾಗಾಗಿ ಕಳೆದು ಒಂದು ವಾರದಿಂದ ಬೆಂಗಳೂರು ಲಾಕ್ ಡೌನ್ ಮಾಡಲಾಗುತ್ತದೆ ಎಂಬ ಚರ್ಚೆ ಶುರುವಾಗಿದೆ. ಆದರೆ ಯಾವುದೇ ಕಾರಣಕ್ಕೂ ಬೆಂಗಳೂರು ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ
ಲಾಕ್ ಡೌನ್ ಆಗುತ್ತದೆಯೇ ಅಥಾವ ಇಲ್ಲವೋ ಎಂಬ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಶುರುವಾಗಿತ್ತು. ಅಲ್ಲದೆ ರಾಜ್ಯದ ಜನ ಆತಂಕಕ್ಕೆ ಒಳಗಾಗಿದ್ದರು. ಈ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೊರೊನಾ ನಿಯಂತ್ರಣ ಮಾಡುವಲ್ಲಿ ರಾಜ್ಯ ಮಾದರಿಯಾಗಿದೆ. ಹೆಚ್ಚಾಗುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಣ ಮಾಡಲು ಮತ್ತಷ್ಟು ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಆದ್ದರಿಂದ ಸಲಹೆ ಪಡೆಯಲು ಸರ್ವಪಕ್ಷ ಸಭೆ ಕರೆಯಲಾಗಿದೆ. ವಿರೋಧ ಪಕ್ಷದ ಶಾಸಕರು ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು.
ಲಾಕ್ ಡೌನ್ ಮಾಡಿದರೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ನಮಗೆ ಆರ್ಥಿಕತೆ ಮುಖ್ಯ. ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಿಂದ ನಿಧಾನವಾಗಿ ಹೊರ ಬರುತ್ತಿದೆ. ಆದ್ದರಿಂದ ಲಾಕ್ ಡೌನ್ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.








