ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಮಾಡಲಾದ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ದಾಖಲೆ ಸೋರಿಕೆ ಅರೋಪ ಬಿಜೆಪಿಯ ಹಿರಿಯ ಮುಖಂಡ, ಮಾಜಿ ಸಚಿವ ಮುರುಗೇಶ್ ನಿರಾಣಿ ತಲೆಗೆ ಸುತ್ತಿಕೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಫುಲ್ ಗರಂ ಆಗಿದ್ದಾರೆ.

ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಸಭೆಯೊಂದರಲ್ಲಿ ನೀರಾಣಿ ನೀಡಿದ್ದಾರೆ ಎನ್ನಲಾದ ಹೇಳಿಕೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬಿಜಾಪುರದಿಂದ ಬರುವಾಗ ನನ್ನೊಂದಿಗೆ ಒಬ್ಬ ಅಧಿಕಾರಿ ಇದ್ದರು. ಸುಮಾರು 125 ಪುಟಗಳ ಡಾಕ್ಯುಮೆಂಟ್ಸ್ಗಳನ್ನು ಪೆನ್ಡ್ರೈವ್ನಲ್ಲಿ ಇಟ್ಟುಕೊಂಡಿದ್ದರು. ಅದನ್ನು ನಾನು ತಮಗೆ ಕಳಿಸಿಕೊಡುತ್ತೇನೆ. ಅದರಲ್ಲಿ ಖರೀದಿ ಮಾಡಿರುವ ಪಿಪಿಇ ಕಿಟ್ಗಳು, ಲೋಕಲ್ ಸ್ಯಾನಿಟೈಸರ್, 70-80 ಬೆಲೆ ಬಾಳುವ ಬಕೆಟ್ಗೆ 500 ರೂ. ದರದಲ್ಲಿ ಬಿಲ್ ಮಾಡಲಾಗಿದೆ. 30 ಬೆಲೆ ಬಾಳುವ ಉಪಕರಣಗಳಿಗೆ 3,000 ದರದ ಬಿಲ್ ಹಾಕಲಾಗಿದೆ. ಇವುಗಳಿಗೆಲ್ಲ ಪ್ರೂಫ್ ಅವರಲ್ಲಿದೆ. ಅವು ಪೆನ್ಡ್ರೈವ್ನಲ್ಲಿದ್ದು, ಅದನ್ನು ಡೌನ್ ಲೋಡ್ ಮಾಡಲು ಸಾಧ್ಯವಾಗಿಲ್ಲ. ಇಲ್ಲವೆಂದರೆ ಆ ದಾಖಲೆಗಳ ಪ್ರಿಂಟ್ ಔಟ್ ನಾನು ಸಲ್ಲಿಸುತ್ತಿದ್ದೆ ಎಂದು ಮರುಗೇಶ್ ನಿರಾಣಿ ಮಾತನಾಡಿದ್ದಾರೆ ಎನ್ನಲಾಗಿದೆ.
ತಮ್ಮ ಹೇಳಿಕೆ ಸೋರಿಕೆಯಾಗಿ ಸರ್ಕಾರಕ್ಕೆ ಆಪತ್ತು ತರುತ್ತದೆ ಎಂಬ ಅರಿವು ಮೂಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ನಿರಾಣಿ, ತಾವು ಆ ರೀತಿ ಹೇಳಿಕೆಯನ್ನೇ ನೀಡಿಲ್ಲ ಎಂದಿದ್ದಾರೆ.
ಇದು ಯಡಿಯೂರಪ್ಪ ಅವರ ಗಮನಕ್ಕೆ ಬಂದಿದ್ದು, ನಿರಾಣಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಸಚಿವ ಸ್ಥಾನ ಸಿಗದೇ ಹತಾಶರಾಗಿರುವ ಮುರುಗೇಶ್ ನಿರಾಣಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಹೂಡಿರುವ ತಂತ್ರವೂ ಆಗಿರಬಹುದು ಎಂದು ಬಿಜೆಪಿಯ ಮೂಲಗಳು ಹೇಳಿವೆ.








