ಸಚಿನ್ ಪೈಲಟ್ ಬಣದ ವಿರುದ್ಧ ಕ್ರಮ ಕೈಗೊಳ್ಳದಂತೆ ರಾಜಸ್ಥಾನ ಹೈಕೋರ್ಟ್ ನಿಂದ ಸ್ಪೀಕರ್ ಗೆ ಆದೇಶ
ಜೈಪುರ, ಜುಲೈ 17: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜಸ್ಥಾನದ ಹೈ ಕೋರ್ಟ್, ಅಸೆಂಬ್ಲಿ ಸ್ಪೀಕರ್ ಸಿಪಿ ಜೋಶಿ ಅವರಿಗೆ ಅನರ್ಹತೆ ನೋಟಿಸ್ ನೀಡಿದ್ದ ಸಚಿನ್ ಪೈಲಟ್ ಮತ್ತು 18 ಶಾಸಕರ ವಿರುದ್ಧ ಕ್ರಮ ಕೈಗೊಳ್ಳದಂತೆ ಆದೇಶ ನೀಡಿದೆ. ಅನರ್ಹತೆ ನೋಟಿಸ್ ನೀಡಿದ್ದ ಸ್ಪೀಕರ್ ನಿರ್ಧಾರವನ್ನು ಸಚಿನ್ ಪೈಲಟ್ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದೂ, ಇಂದು ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಲಯ ಸೋಮವಾರ ಪ್ರಕರಣದ ವಿಚಾರಣೆಯನ್ನು ಪುನರಾರಂಭಿಸಲಿದೆ. ಸ್ಪೀಕರ್ ನೀಡಿದ ಆದೇಶಕ್ಕೆ ಪ್ರತಿಕ್ರಿಯಿಸಲು ಇನ್ನೇನು ಕೆಲವು ನಿಮಿಷಗಳು ಬಾಕಿ ಇರುವಾಗ ನ್ಯಾಯಾಲಯ ನೀಡಿದ ಮಧ್ಯಂತರ ಆದೇಶದಿಂದ ಪೈಲಟ್ ಸ್ವಲ್ಪ ಮಟ್ಟಿಗೆ ನಿರಾತಂಕರಾಗಿದ್ದಾರೆ.
ಪಕ್ಷಾಂತರ-ವಿರೋಧಿ ಕಾನೂನಿನಡಿಯಲ್ಲಿ ಈಗಾಗಲೇ ಸಚಿನ್ ಪೈಲಟ್ ಅವರ ಗುಂಪನ್ನು ಅನರ್ಹ ಗೊಳಿಸಿದ ಸ್ಪೀಕರ್ ನಿರ್ಧಾರವನ್ನು ಗುರುವಾರ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಆದರೆ ಕಾಂಗ್ರೆಸ್ ನಿಂದ ಅನರ್ಹಗೊಳ್ಳುವ ಯಾವುದೇ ಯಾವುದೇ ತಪ್ಪನ್ನು ನಾವು ಮಾಡಿಲ್ಲ ಅಥವಾ ಹೇಳಿಲ್ಲ ಎಂದು ನ್ಯಾಯಾಲಯದಲ್ಲಿ ಸಚಿನ್ ಪೈಲಟ್ ಬಣ ವಾದ ಮಂಡಿಸಿತು. ಅಷ್ಟೇ ಅಲ್ಲ ನಾವು ಶಾಸಕರು, ಸದನದ ಸದಸ್ಯತ್ವವನ್ನು ಬಿಟ್ಟುಕೊಟ್ಟಿಲ್ಲ ಆದರೆ ಎರಡು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗಳಿಗೆ ಹಾಜರಾಗಲು ವಿಫಲರಾಗಿದ್ದರಿಂದ ಪಕ್ಷಾಂತರದ ಆಧಾರದ ಮೇಲೆ ಅನರ್ಹಗೊಳಿಸಲಾಗದು ಎಂದು ವಾದಿಸಿದರು.
ಗೆಹಲೋಟ್ ಬಂಡಾಯ ಶಾಸಕರನ್ನುಅನರ್ಹಗೊಳಿಸಿ ತನ್ನ ಸರಕಾರದ ಉಳಿಸಲು ಕೈಗೊಂಡ ಆತುರದ ನಿರ್ಧಾರ ಸೋಮವಾರದ ನ್ಯಾಯಾಲಯದ ತೀರ್ಪಿನಲ್ಲಿ ಇತ್ಯರ್ಥವಾಗಲಿದೆ. ಕೆಲವು ದಿನಗಳಿಂದ ಕಾಂಗ್ರೆಸ್ ಬಣದಲ್ಲಿ ನಡೆಯುತ್ತಿರುವ ಭಿನ್ನಮತದ ಕಾವು ಇದೀಗ ರಾಷ್ಟ್ರ ರಾಜಕಾರಣದಲ್ಲಿ ತಲ್ಲಣವನ್ನೆಬ್ಬಿಸಿದ್ದು, ಪೈಲಟ್ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲವೆಂದು ತಿಳಿಸಿದ್ದಾರೆ . ಇತ್ತ ತೆರೆಮರೆಯಲ್ಲಿ ತನ್ನ ರಾಜಕೀಯ ಉಳಿವಿಗಾಗಿ ವಸುಂದರಾ ರಾಜೇ ಗೆಹಲೋಟ್ ಸರಕಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಅನ್ನುವ ಗುಸು ಗುಸು ಮಾತುಗಳು ಚರ್ಚೆಯಲ್ಲಿದ್ದು, ಒಟ್ಟಿನಲ್ಲಿ ರಾಜಸ್ತಾನದಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದೆ ಜೊತೆಗೆ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ.