ಜೈಪುರ: ರಾಜಸ್ಥಾನದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ವಿಧಾನಸಭೆ ಅಧಿವೇಶನ ಕರೆಯುವಂತೆ ರಾಜ್ಯಪಾಲರ ಮೇಲೆ ಒತ್ತಡ ಹೇರುತ್ತಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಷ್ಟ್ರಪತಿ ಹಾಗೂ ಪ್ರಧಾನಿ ಅಂಗಳದವರೆಗೆ ಬಿಕ್ಕಟ್ಟು ಕೊಂಡೊಯ್ಯಲು ಸಿದ್ಧತೆ ನಡೆಸಿದ್ದಾರೆ.
ಮೂರು ದಿನಗಳು ಕಳೆದರೂ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು. ಅಗತ್ಯವಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಎದುರೂ ಶಾಸಕರೊಂದಿಗೆ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಬಿಜೆಪಿಯ ಷಡ್ಯಂತ್ರ ಸಫಲವಾಗಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ತಿಳಿಸಿದ್ದಾರೆ.
ಜೈಪುರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಇಂದು ಮತ್ತೊಮ್ಮೆ ಅಧಿವೇಶನ ಕರೆಯಲು ಅನುಮತಿ ನೀಡುವಂತೆ ಕೋರಿ ರಾಜ್ಯಪಾಲರಿಗೆ ಮತ್ತೊಂದು ಮನವಿ ಪತ್ರ ನೀಡುವುದು, ರಾಜ್ಯಪಾಲರ ಒಪ್ಪಿಗೆ ಸಿಗುವವರೆಗೆ ಅಥವಾ 3 ವಾರಗಳ ಕಾಲ ಶಾಸಕರನ್ನು ಹೋಟೆಲ್‍ನಲ್ಲಿಯೇ ಇರಿಸಿಕೊಳ್ಳಲು ಕಾಂಗ್ರೆಸ್ ತೀರ್ಮಾನಿಸಿದೆ.
ಬಹುಮತ ಸಾಬೀತು ಮಾಡಲು ಸದ್ಯಕ್ಕೆ ಅಗತ್ಯವಿರುವ ಶಾಸಕರ ಬೆಂಬಲ ಹೊಂದಿರುವ ಅಶೋಕ್ ಗೆಹ್ಲೋಟ್, ವಿಳಂಬ ಮಾಡಿದ್ದಷ್ಟು ಅಧಿಕಾರ ಕೈತಪ್ಪಿ ಹೋಗುವ ಅಪಾಯದ ಮುನ್ಸೂಚನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಅಧಿವೇಶನ ಕರೆಯುವಂತೆ ಒತ್ತಡ ಹೇರುತ್ತಿದ್ದಾರೆ.
ಈ ನಡುವೆ, ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜೀನಾಮೆ ಪಡೆಯುವಂತೆ ಬಿಜೆಪಿ ಆಗ್ರಹಿಸಿದೆ. ರಾಜ್ಯಪಾಲ ಕಲ್ರಾಜ್ ಅವರನ್ನು ಭೇಟಿ ಮಾಡಿದ ಬಿಜೆಪಿ ನಿಯೋಗ, ರಾಜಭವನದ ಮುಂದೆ ಶಾಸಕರಿಂದ ಧರಣಿ ನಡೆಸುವ ಮೂಲಕ ಕಾನೂನು ಉಲ್ಲಂಘನೆ ಮಾಡಿದೆ ಎಂದು ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಆಗ್ರಹಿಸಿದೆ.

ಸೋಮವಾರ ಸುಪ್ರೀಂ ವಿಚಾರಣೆ
ರಾಜಸ್ಥಾನ ಕಾಂಗ್ರೆಸ್ ಪಕ್ಷದ 19 ಶಾಸಕರ ಅನರ್ಹತೆ ಪ್ರಕರಣದ ಅರ್ಜಿಯ ವಿಚಾರಣೆ ಸೋಮವಾರ ಸುಪ್ರೀಂಕೋರ್ಟ್‍ನಲ್ಲಿ ನಡೆಯಲಿದೆ. ಸೋಮವಾರ ಮಧ್ಯಾಹ್ನ 11 ಗಂಟೆಗೆ ಅರ್ಜಿ ಕೈಗೆತ್ತಿಕೊಳ್ಳಲಿರುವ ಸುಪ್ರೀಂಕೋರ್ಟ್, ಸಚಿನ್ ಪೈಲಟ್ ಬಣ ಸಲ್ಲಿಸಿರುವ ಅನರ್ಹತೆ ಅರ್ಜಿಯ ವಿಚಾರಣೆ ನಡೆಸಲಿದೆ.








