ಸುದೀರ್ಘ ಮೂರುವರೆ ದಶಕಗಳ ನಂತರ ಇತ್ಯರ್ಥಗೊಂಡ ರಾಜಸ್ಥಾನಿ ರಾಜಮನೆತನದ ಪ್ರಭಾವಿಯ ಹತ್ಯೆ ಪ್ರಕರಣ:
ಮಥುರಾ, ಜುಲೈ 25: 1985ರಲ್ಲಿ ರಾಜಸ್ಥಾನದ ರಾಜಪ್ರಭುತ್ವದ ಪ್ರಭಾವಿ ನೇತಾರ, ಭರತ್‌ಪುರದ ಅಂದಿನ ಮುಖ್ಯಸ್ಥ ರಾಜಾ ಮನ್ ಸಿಂಗ್‌ನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್ ಸಿಂಗ್ ಭತಿ ಸೇರಿ ಹನ್ನೊಂದು ಪೊಲೀಸರು ಶಿಕ್ಷೆಗೊಳಗಾಗಿದ್ದಾರೆ. ಕಳೆದ ಎರಡು ದಶಕಗಳಿಂದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಉತ್ತರ ಪ್ರದೇಶದ ಮಥುರಾದ ನ್ಯಾಯಾಲಯವು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿದೆ.
1985 ರ ಫೆಬ್ರವರಿ 21 ರಂದು ನಡೆದ ಈ ಹತ್ಯೆ ರಾಜಸ್ಥಾನದಲ್ಲಿ ರಾಜಕೀಯ ಚಂಡಮಾರುತವನ್ನು ಸೃಷ್ಟಿಸಿತು ಮತ್ತು ಘಟನೆಯ ಎರಡು ದಿನಗಳ ನಂತರ ಕಾಂಗ್ರೆಸ್ ಮುಖ್ಯಮಂತ್ರಿ ಶಿವ ಚರಣ್ ಮಾಥುರ್ ಅವರ ರಾಜೀನಾಮೆಗೆ ಕಾರಣವಾಯಿತು. ಸಿನಿಮೀಯ ರೀತಿಯಲ್ಲೇ ಪೊಲೀಸರಿಂದ ಶರಣಾಗಲು ಬಂದ ರಾಜಾ ಮನ್ ಸಿಂಗ್‌ನನ್ನು ಕೊಲೆ ಮಾಡಲಾಯಿತು.

ಏನಿದು ಪ್ರಕರಣ :
1985 ರಲ್ಲಿ ರಾಜಸ್ಥಾನದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಡೀಗ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಏಳು ಬಾರಿ ಶಾಸಕರಾಗಿದ್ದ ರಾಜಾ ಮನ್ ಸಿಂಗ್ ವಿರುದ್ಧ ಕಾಂಗ್ರೆಸ್ ನಿವೃತ್ತ ಐಎಎಸ್ ಅಧಿಕಾರಿ ಬ್ರಿಜೇಂದ್ರ ಸಿಂಗ್ ಅವರನ್ನು ಕಣಕ್ಕಿಳಿಸಿತು.
ಆದರೆ ಫೆಬ್ರವರಿ 20, 1985 ರಂದು ಕಾಂಗ್ರೆಸ್ ಕಾರ್ಯಕರ್ತರು ಭರತ್ ಪುರ ಸಂಸ್ಥಾನದ ಧ್ವಜವನ್ನು ಅವಮಾನಿಸಿದರು. ಇದರಿಂದ ಕೆರಳಿದ ರಾಜ ಮನ್ ಸಿಂಗ್ ತಮ್ಮ ಜೀಪ್ ಏರಿ ಮುಖ್ಯಮಂತ್ರಿಗಳ ರ್ಯಾಲಿಗೆಂದು ನಿರ್ಮಿಸಿದ್ದ ಸ್ಟೇಜ್ ಮತ್ತು ಪೆಂಡಾಲ್ ಛಿದ್ರಮಾಡಿದ್ದಲ್ಲದೆ ಮುಖ್ಯಮಂತ್ರಿಯ ಚುನಾವಣಾ ಪ್ರಚಾರಕ್ಕೆ ಬಳಸಿದ ಚಾಪರ್ ಅನ್ನು ಹಾನಿಗೊಳಿಸಿದ್ದರು.
ಮರುದಿನ, ಪ್ರಕರಣಕ್ಕೆ ಸಂಭದಿಸಿದಂತೆ ರಾಜಾ ಮನ್ ಸಿಂಗ್ ಮತ್ತು ಅವರ ಇಬ್ಬರು ಸಹಚರರು ಶರಣಾಗಲು ಸ್ಥಳೀಯ ಪೊಲೀಸ್ ಠಾಣೆಗೆ ಹೋಗುತ್ತಿದ್ದಾಗ, ಉಪ ಅಧೀಕ್ಷಕ ಕಾನ್ ಸಿಂಗ್ ಭತಿ ನೇತೃತ್ವದ ಪೊಲೀಸ್ ತಂಡವು ಗುಂಡು ಹಾರಿಸಿದ್ದರಿಂದ ರಾಜಾ ಮನ್ ಸಿಂಗ್ ಮತ್ತು ಅವರ ಸಹಚರರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ರಾಜಾ ಮನ್ ಸಿಂಗ್ ಅವರ ಮೊಮ್ಮಗ ದುಶ್ಯಂತ್ ಸಿಂಗ್ ತನ್ನ ಹೇಳಿಕೆಯಲ್ಲಿ, ಹತ್ಯೆಗೆ ಕಾರಣವಾದ ಘಟನೆಗಳನ್ನು ವಿವರಿಸಿದ್ದಾರೆ.

ಮುಖ್ಯಮಂತ್ರಿ ರಾಜೀನಾಮೆ ಮತ್ತು ಸಿ ಬಿ ಐ ತನಿಖೆಗೆ:
ಘಟನೆಯಾದ ಎರಡು ದಿನಗಳ ನಂತರ ಆಗಿನ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದ ಶಿವ ಚರಣ್ ಮಾಥುರ್, ರಾಜ ಮನ್ ಸಿಂಗ್ ಹತ್ಯೆಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ಮತ್ತು ಒಂದು ವಾರದ ನಂತರ ಅಂದರೆ ಫೆಬ್ರವರಿ 28 ರಂದು ಸಿಬಿಐ ವಿಚಾರಣೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಸಾರ್ವಜನಿಕ ಅಧೀಕ್ಷಕರ ಮೇರೆಗೆ ಕೊಲೆ ಮಾಡಿದ ಪೊಲೀಸರನ್ನು ಮತ್ತು ಉಪ ಅಧೀಕ್ಷಕ ಕಾನ್ ಸಿಂಗ್ ಭತಿ ಅವರನ್ನು ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಸೇವೆಯಿಂದ ವಜಾ ಮಾಡಲಾಯಿತು.
ಯಾರು ಈ ರಾಜಾ ಮನ್ ಸಿಂಗ್ :
ಗೌರವಾನ್ವಿತ ಸೇನಾ ಕರ್ನಲ್ ಆಗಿದ್ದ ಮಹಾರಾಜ ಬ್ರಜೇಂದ್ರ ಸಿಂಗ್ ಅವರ ನಾಲ್ಕು ಸಹೋದರರಲ್ಲಿ ರಾಜಾ ಮನ್ ಸಿಂಗ್ ಎರಡನೆಯವರಾಗಿದ್ದರು. 1929 ರಲ್ಲಿ ಅವರ ತಂದೆ ಮಹಾರಾಜ ಕಿಶನ್ ಸಿಂಗ್ ಅಧಿಕಾರ ವಹಿಸಿಕೊಂಡರು. ಅವರ ತಂದೆಯ ನಂತರ ಬ್ರಿಜೇಂದ್ರ ಸಿಂಗ್ ಭರತ್ ಪುರ ಕೋಟೆಯ ಪಾಲಕರಾದರು. ರಾಜಾ ಮನ್ ಸಿಂಗ್ ಅವರು ರಾಜ್ಯದ ಒತ್ತಡದಿಂದಾಗಿ ಸೇವೆಯನ್ನು ತೊರೆಯನ್ನು ತೊರೆಯುವ ಮೊದಲು ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಈ ಪ್ರಕರಣದ ವಿಚಾರಣೆಯನ್ನು ಮೊದಲು ರಾಜಸ್ಥಾನ ನ್ಯಾಯಾಲಯದಲ್ಲಿ ನಡೆಸಲಾಯಿತು. ಆದರೆ ಸುಪ್ರೀಂ ಕೋರ್ಟ್‌ನ ಸೂಚನೆಯ ಮೇರೆಗೆ ಮಥುರಾಕ್ಕೆ ವರ್ಗಾಯಿಸಲಾಯಿತು. ಒಟ್ಟು 1,700 ಕ್ಕೂ ಹೆಚ್ಚು ವಿಚಾರಣೆಗಳನ್ನು ನಡೆಸಲು ಸುಮಾರು 35 ವರ್ಷಗಳೇ ಬೇಕಾಯಿತು.
ನ್ಯಾಯಾಲಯದ ತೀರ್ಪು:

ಎರಡು ದಶಕಗಳ ಸುದೀರ್ಘ ತನಿಖೆಯ ನಂತರ ಇದೀಗ ರಾಜವಂಶಸ್ಥ ರಾಜಾ ಮನ್ ಸಿಂಗ್ ಕೊಲೆಗಡುಕ ಪೊಲೀಸರನ್ನು ಮತ್ತು ಉಪ ಅಧೀಕ್ಷಕ ಕಾನ್ ಸಿಂಗ್ ಭತಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಸ್ತುತ ರಾಜಸ್ತಾನ ಬಿಕ್ಕಟ್ಟಿನಲ್ಲಿ ರಾಜಾ ಮನ್ ಸಿಂಗ್ ಅವರ ಸೋದರಳಿಯ:
ಏತನ್ಮದ್ಯೆ ಪ್ರಸ್ತುತ ರಾಜಸ್ತಾನ ಬಿಕ್ಕಟ್ಟಿನಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಕಾರ್ಯವೈಖರಿ ಬಗ್ಗೆ ಬಂಡಾಯವೆದ್ದ ಸಚಿನ್ ಪೈಲಟ್ ಜೊತೆಗಿರುವ 18 ಶಾಸಕರಲ್ಲಿ ಒಬ್ಬರಾದ ವಿಶ್ವೇಂದ್ರ ಸಿಂಗ್, ಕೊಲೆಯಾದ ರಾಜಾ ಮನ್ ಸಿಂಗ್ ಅವರ ಸೋದರಳಿಯ.
ಅಶೋಕ್ ಗೆಹ್ಲೋಟ್ ವಿರುದ್ಧ ಬಿಜೆಪಿಯೊಂದಿಗೆ ಸೇರಿ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿ ವಿಶ್ವೇಂದ್ರ ಸಿಂಗ್ ಮತ್ತು ಇನ್ನೊಬ್ಬ ಕಾಂಗ್ರೆಸ್ ಶಾಸಕ ಭನ್ವರ್ ಲಾಲ್ ಶರ್ಮಾ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಸೋಮವಾರ ವಿಶ್ವೇಂದ್ರ ಸಿಂಗ್ ಅವರು ರಾಜ್ಯದ ಕಾಂಗ್ರೆಸ್ ಸರಕಾರ ಪ್ರಜಾಪ್ರಭುತ್ವವನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅದೇನೆ ಇರಲಿ ಸುದೀರ್ಘ 35 ವರ್ಷಗಳ ಹಿಂದಿನ ರಾಜಮನೆತನದ ಹತ್ಯೆ ಕೊನೆಗೂ ಇತ್ಯರ್ಥಗೊಂಡು ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಮೂಲಕ ಅಂತ್ಯಕಂಡಿದೆ.








