ಬೆಂಗಳೂರು, ಜೂ.2 ; ಕೊರೊನಾ ಕಾಟದ ನಡುವೆ ರಾಜ್ಯ ಸರ್ಕಾರಕ್ಕೆ ಇದೇ 19ರಂದು ನಡೆಯುವ ರಾಜ್ಯಸಭೆಯ ನಾಲ್ಕು ಸ್ಥಾನಗಳ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವುದೇ ದೊಡ್ಡ ಕಗ್ಗಂಟಾಗಿ ಪರಿಣಮಿಸಿದೆ. ಬಿಜೆಪಿಯಿಂದ ವಿಧಾನಸಭೆಯ ಬಲಾಬಲದಲ್ಲಿ ಇಬ್ಬರು ರಾಜ್ಯಸಭೆಗೆ ಸುಲಭವಾಗಿ ಆಯ್ಕೆಯಾಗುವರು. ಓರ್ವ ಅಭ್ಯರ್ಥಿಗೆ ತಲಾ 45 ಮತಗಳ ಅಗತ್ಯವಿರುವುದರಿಂದ ಬಿಜೆಪಿಗೆ ರುವ 117 ಸದಸ್ಯರ ಬಲದಿಂದ ಇಬ್ಬರು ಆಯ್ಕೆಗೆ ದಾರಿ ಸುಗಮವಾಗಲಿದೆ. ಆದ್ರೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆದಿದೆ.
ಈಗಾಗಲೇ ಎರಡು ಬಾರಿ ರಾಜ್ಯಸಭೆಗೆ ಆಯ್ಕೆ ಆಗಿರುವ ಪ್ರಭಾಕರ್ ಕೋರೆ, ಪುನಃ ಆಯ್ಕೆ ಬಯಸಿದ್ದಾರೆ. ಉಳಿದಂತೆ ಪಕ್ಷದ ವಕ್ತಾರ ಡಾ.ವಾಮನಚಾರ್ಯ, ಪ್ರೊ. ಎಂ.ನಾಗರಾಜ್, ಉದ್ಯಮಿ ವಿಜಯ ಸಂಕೇಶ್ವರ್, ರಮೇಶ್ ಕತ್ತಿ ಸೇರಿದಂತೆ ಮತ್ತಿತರರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.ಆದರೆ ಅಭ್ಯರ್ಥಿಗಳ ಆಯ್ಕೆ ದೆಹಲಿ ಮಟ್ಟದಲ್ಲಿ ನಡೆಯುವುದರಿಂದ ಅಂತಿಮವಾಗಿ ಅದೃಷ್ಟ ಯಾರಿಗೆ ಒಲಿಯಲಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಅಖಾಡದಲ್ಲಿ ಕತ್ತಿ ಸಹೋದರರು!
ಈಗಾಗಲೇ ಶಾಸಕ ಉಮೇಶ್ ಕತ್ತಿ ತಮ್ಮ ಸಹೋದರನಿಗೆ ಟಿಕೆಟ್ ಕೊಡಿಸಲು ಅಖಾಡಕ್ಕಿಳಿದಿದ್ದಾರೆ. ಎರಡು ಬಾರಿ ಪ್ರಭಾಕರ್ ಕೋರೆ ರಾಜ್ಯಸಭೆಗೆ ಆಯ್ಕೆಯಾಗಿರುವುದರಿಂದ ಪುನಃ ಅವರಿಗೆ ಮಣೆ ಹಾಕುವುದಕ್ಕೆ ಬೆಳಗಾವಿಯ ಕತ್ತಿ ಸಹೋದರರು ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ರಮೇಶ್ ಕತ್ತಿ ಅವರು ಆಕಾಂಕ್ಷಿಯಾಗಿದ್ದರು. ಕೊನೆ ಕ್ಷಣದಲ್ಲಿ ಅಚ್ಚರಿಯ ಬೆಳವಣಿಗೆ ಎಂಬಂತೆ ಅಣ್ಣಾಸಾಹೇಬ್ ಜೊಲ್ಲೆ ಟಿಕೆಟ್ ಪಡೆದು ವಿಜೇತರಾದರು.
ಟಿಕೆಟ್ ಕೈ ತಪ್ಪಿದ ಸಂದರ್ಭದಲ್ಲಿ ಯಡಿಯೂರಪ್ಪ ಕತ್ತಿ ಸಹೋದರರನ್ನು ಸಮಾಧಾನಪಡಿಸಿ ರಾಜ್ಯಸಭೆಗೆ ರಮೇಶ್ ಕತ್ತಿಗೆ ಟಿಕೆಟ್ ಕೊಡಿಸುವ ಆಶ್ವಾಸನೆ ಕೊಟ್ಟಿದ್ದರು. ಈಗ ಇದುವೇ ಅವರಿಗೆ ಮುಳುವಾಗಿ ಪರಿಣಮಿಸಿದೆ.
ಅಂತರ ಕಾಯ್ದುಕೊಂಡ ರಾಜಾಹುಲಿ
ಕೊರೊನಾ ಹಿನ್ನೆಲೆ ಈ ಬಾರಿಯ ರಾಜ್ಯಸಭೆ ಚುನಾವಣೆಯ ಬಗ್ಗೆ ಸಿಎಂ ಯಡಿಯೂರಪ್ಪ ಅಷ್ಟಾಗಿ ಗಮನಹರಿಸಿಲ್ಲ. ಹೈಕಮಾಂಡ್ ಯಾರನ್ನೇ ಅಭ್ಯರ್ಥಿ ಎಂದು ಘೋಷಿಸಿದರೂ ಅವರ ಗೆಲುವಿಗೆ ಸಹಕಾರ ನೀಡುವಂತೆ ಸಿಎಂ ಶಾಸಕರಿಗೆ ಸೂಚನೆ ಕೊಡಲಿದ್ದಾರೆ. ಈ ಬಾರಿ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಅವರು ತುಸು ಅಂತರ ಕಾಪಾಡಿಕೊಳ್ಳಲು ತೀರ್ಮಾನಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ