ಕೇಂದ್ರದ ವಿರುದ್ಧ ಮತ್ತೊಂದು ಸಮರಕ್ಕೆ ರಾಕೇಶ್ ಟಿಕಾಯತ್ ಕರೆ Rakesh Tikait saaksha tv
ನವದೆಹಲಿ : ಕೃಷಿ ಕಾನೂನು ವಿರೋಧಿಸಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿ ಗೆದ್ದಿರುವ ರೈತ ಮುಖಂಡ ರಾಕೇಶ್ ಟಿಕಾಯತ್, ಇದೀಗ ಮತ್ತೊಂದು ಸಮರಕ್ಕೆ ಕರೆಕೊಟ್ಟಿದ್ದಾರೆ.
ಕೇಂದ್ರ ಸರ್ಕಾರ ಸೋಮವಾರ ಚಳಿಗಾಲದ ಅಧಿವೇಶನದಲ್ಲಿ ಬ್ಯಾಂಕ್ಗಳ ಖಾಸಗೀಕರಣಕ್ಕೆ ಸಂಬಂಧಿಸಿದ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ. ಇದನ್ನು ವಿರೋಧಿಸಿ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಬ್ಯಾಂಕ್ಗಳ ಖಾಸಗೀಕರಣದ ವಿರುದ್ಧ ಪ್ರತಿಭಟನೆಗೆ ಸೂಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಕೇಶ್ ಅವರು, ಕೇಂದ್ರ ಸರ್ಕಾರ ಸೋಮವಾರ ಸಂಸತ್ತಿನಲ್ಲಿ ಬ್ಯಾಂಕುಗಳ ಖಾಸಗೀಕರಣದ ಮಸೂದೆಯನ್ನು ಮಂಡಿಸಬಹುದು. ಇದನ್ನು ವಿರೋಧಿಸಿ ರೈತರು ಧ್ವನಿ ಎತ್ತಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.ಅಲ್ಲದೇ ಬ್ಯಾಂಕ್ ಗಳ ಖಾಸಗೀಕರಣ ವಿರೋಧಿಸಿ ರಾಷ್ಟ್ರವ್ಯಾಪಿ ಚಳವಳಿಗೆ ಕರೆ ನೀಡಿದ್ದಾರೆ.
ಇನ್ನು ಬ್ಯಾಂಕ್ ಗಳ ಖಾಸಗೀಕರಣ ವಿರೋಧಿಸಿ ಒಂಭತ್ತು ಬ್ಯಾಂಕ್ ಒಕ್ಕೂಟಗಳ ಪ್ರಾತಿನಿಧಿಕ ಸಂಸ್ಥೆ ಡಿಸೆಂಬರ್ 16 ಹಾಗೂ 17ರಂದು ಎರಡು ದಿನಗಳ ದೇಶವ್ಯಾಪ್ತಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿವೆ.