ಸ್ಯಾಂಡಲ್‌ವುಡ್ ಅಂಗಳದಲ್ಲಿ ಇಂದಿಗೂ ಮಾಸದ, ಆಗಾಗ ಚರ್ಚೆಗೆ ಬರುವ ವಿಚಾರವೆಂದರೆ ಅದು ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ಬ್ರೇಕಪ್ ಕಹಾನಿ. ಕಿರಿಕ್ ಪಾರ್ಟಿ ಮೂಲಕ ಮೋಡಿ ಮಾಡಿ, ರಿಯಲ್ ಲೈಫ್‌ನಲ್ಲೂ ಒಂದಾಗಲು ನಿರ್ಧರಿಸಿದ್ದ ಈ ಜೋಡಿ, ನಿಶ್ಚಿತಾರ್ಥದ ಬಳಿಕ ದೂರವಾಗಿದ್ದು ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದ ಸತ್ಯವಾಗಿತ್ತು. ಇಬ್ಬರೂ ಈ ಬಗ್ಗೆ ಮೌನ ವಹಿಸಿದ್ದರೂ, ಈಗ ರಕ್ಷಿತ್ ಶೆಟ್ಟಿ ಅವರ ಆಪ್ತ ಸ್ನೇಹಿತ, ನಟ ಪ್ರಮೋದ್ ಶೆಟ್ಟಿ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅವರ ಈ ಹೇಳಿಕೆ ಈಗ ಗಾಂಧಿನಗರದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಮೌನ ಮುರಿದ ಪ್ರಮೋದ್ ಶೆಟ್ಟಿ
ಅರ್ಜುನ್ ಜನ್ಯಾ ನಿರ್ದೇಶನದ 45 ಚಿತ್ರದ ಪ್ರಚಾರದ ವೇಳೆ ಬಿಯಾಂಡ್ ಲಿಮಿಟ್ಸ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ ಪ್ರಮೋದ್ ಶೆಟ್ಟಿ, ರಕ್ಷಿತ್ ಮತ್ತು ರಶ್ಮಿಕಾ ಬ್ರೇಕಪ್ ಹಿಂದಿನ ಅಸಲಿ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಶೆಟ್ಟಿ ಗ್ಯಾಂಗ್‌ನಲ್ಲಿ ಬಿರುಕು ಮೂಡಿದೆಯಾ ಎಂಬ ಪ್ರಶ್ನೆಗೆ ಉತ್ತರಿಸುತ್ತಲೇ, ರಕ್ಷಿತ್-ರಶ್ಮಿಕಾ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ರಕ್ಷಿತ್ ಶೆಟ್ಟಿ ಆ ನೋವಿನಿಂದ ಹೊರಬರಲು ಸಮಯ ತಗೊಂಡ
ಬ್ರೇಕಪ್ ಆದ ಹೊಸತರಲ್ಲಿ ರಕ್ಷಿತ್ ಶೆಟ್ಟಿ ಮಾನಸಿಕವಾಗಿ ಕುಗ್ಗಿದ್ದರು ಎಂಬುವುದನ್ನು ಪ್ರಮೋದ್ ಒಪ್ಪಿಕೊಂಡಿದ್ದಾರೆ. ರಕ್ಷಿತ್ ಆ ಘಟನೆಯಿಂದ, ಆ ನೋವಿನಿಂದ ಆಚೆ ಬರಲು ಕೊಂಚ ಸಮಯ ತೆಗೆದುಕೊಂಡರು. ಆದರೆ ಒಮ್ಮೆ ಅದರಿಂದ ಹೊರಬಂದ ಮೇಲೆ ಅವರು ಮತ್ತೆ ಹಿಂದಿರುಗಿ ನೋಡಲಿಲ್ಲ. ಈಗ ಅವರು ಇರುವುದರಲ್ಲೇ ಅತೀ ಹೆಚ್ಚು ಖುಷಿಯಾಗಿದ್ದಾರೆ. ರಕ್ಷಿತ್ ಎಂದು ಕೂಡ ರಶ್ಮಿಕಾ ಅವರ ಬಗ್ಗೆ ಸಾರ್ವಜನಿಕವಾಗಿ ಆಗಲಿ, ಖಾಸಗಿಯಾಗಿ ಆಗಲಿ ಯಾವುದೇ ಆರೋಪ ಮಾಡಲಿಲ್ಲ. ಬ್ರೇಕಪ್ ಆದ ನಂತರ ಮಾಜಿ ಪ್ರೇಮಿಯ ಬಗ್ಗೆ ಆರೋಪ ಮಾಡುವುದು ಸರಿಯಲ್ಲ ಎಂಬುದು ನಮ್ಮೆಲ್ಲರ ಭಾವನೆ ಎಂದು ಪ್ರಮೋದ್ ಹೇಳಿದ್ದಾರೆ.
ಅದು ಚೈಲ್ಡಿಶ್ ಬುದ್ಧಿ, ಫೇಮ್ ಬಂದಾಗ ಮನುಷ್ಯ ಬದಲಾಗ್ತಾನೆ
ಬ್ರೇಕಪ್‌ಗೆ ಕಾರಣವೇನು ಎಂಬುದನ್ನು ಪರೋಕ್ಷವಾಗಿ ವಿವರಿಸಿದ ಪ್ರಮೋದ್, ಅದು ಬಹಳ ಚಿಕ್ಕ ವಯಸ್ಸು. ಅವರದ್ದು ಯಾವುದೋ ಒಂದು ಚೈಲ್ಡಿಶ್ ಬುದ್ಧಿ ಇದ್ದಾಗ, ವ್ಯಕ್ತಿ ಬದಲಾದಾಗ ಬೈಯ್ಕೊಂಡು ತಿರುಗಾಡಬಾರ್ದು. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಯಶಸ್ಸು ಮತ್ತು ಫೇಮ್ ಬಂದಾಗ ಬದಲಾವಣೆ ಸಹಜ. ಆ ಸಮಯದಲ್ಲಿ ವ್ಯಕ್ತಿ ಬದಲಾಗಿರುತ್ತಾನೆ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅಂತಿಮವಾಗಿ ಯಾರ ಲೈಫ್ ಯಾರಿಂದಲೂ ಉದ್ಧಾರವೂ ಆಗಲ್ಲ, ಯಾರಿಂದಲೂ ಹಾಳಾಗಲ್ಲ ಎನ್ನುವುದು ನನ್ನ ಬಲವಾದ ಅನಿಸಿಕೆ ಎಂದು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.
ಫ್ಲ್ಯಾಶ್‌ಬ್ಯಾಕ್ ಕಹಾನಿ
ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಕರ್ಣ ಮತ್ತು ಸಾನ್ವಿ ಜೋಡಿಯಾಗಿ ರಕ್ಷಿತ್-ರಶ್ಮಿಕಾ ಮೋಡಿ ಮಾಡಿದ್ದರು. ಈ ಸಿನಿಮಾದ ಶೂಟಿಂಗ್ ಸಮಯದಲ್ಲೇ ಚಿಗುರಿದ ಸ್ನೇಹ ಪ್ರೀತಿಗೆ ತಿರುಗಿತ್ತು. 2017ರ ಜುಲೈ 3ರಂದು ವಿರಾಜ್‌ಪೇಟೆಯಲ್ಲಿ ಇವರಿಬ್ಬರ ಅದ್ದೂರಿ ನಿಶ್ಚಿತಾರ್ಥ ನೆರವೇರಿತ್ತು. ಆದರೆ ರಶ್ಮಿಕಾ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟು, ಗೀತಾ ಗೋವಿಂದಂ ಸಿನಿಮಾದ ಮೂಲಕ ಸ್ಟಾರ್ ಪಟ್ಟಕ್ಕೇರುತ್ತಿದ್ದಂತೆ ಇಬ್ಬರ ನಡುವೆ ಕಂದಕ ಏರ್ಪಟ್ಟಿತ್ತು. ಅಂತಿಮವಾಗಿ ಈ ಜೋಡಿ ಅಧಿಕೃತವಾಗಿ ಬೇರ್ಪಟ್ಟಿತು.
ರಶ್ಮಿಕಾ ಹೇಳಿಕೆ ಮತ್ತು ಕೌಂಟರ್
ಇತ್ತೀಚೆಗೆ ದಿ ಗರ್ಲ್‌ಫ್ರೆಂಡ್ ಸಿನಿಮಾದ ಪ್ರಚಾರದ ವೇಳೆ ರಶ್ಮಿಕಾ, ಟಾಕ್ಸಿಕ್ ಬಾಯ್‌ಫ್ರೆಂಡ್ ಕಾರಣಕ್ಕೆ ಹುಡುಗಿಯರು ನೋವು ಅನುಭವಿಸುತ್ತಾರೆ ಎಂದು ಹೇಳಿದ್ದು, ಅದು ತಮ್ಮದೇ ರಿಯಲ್ ಲೈಫ್ ಕಥೆ ಎಂಬಂತೆ ಬಿಂಬಿತವಾಗಿತ್ತು. ಆಗ ನೆಟ್ಟಿಗರು ರಕ್ಷಿತ್ ಶೆಟ್ಟಿ ಹೆಸರನ್ನು ಎಳೆದು ತಂದು ಟ್ರೋಲ್ ಮಾಡಿದ್ದರು. ಆದರೆ ರಕ್ಷಿತ್ ಮಾತ್ರ ಎಂದಿನಂತೆ ತಮ್ಮ ಮೌನ ಮತ್ತು ಘನತೆಯನ್ನು ಕಾಪಾಡಿಕೊಂಡಿದ್ದರು.
ವಿಜಯ್ ದೇವರಕೊಂಡ ಜೊತೆ ಮದುವೆ?
ಸದ್ಯ ರಶ್ಮಿಕಾ ಮಂದಣ್ಣ ಟಾಲಿವುಡ್ ಹಾರ್ಟ್ ಥ್ರೋಬ್ ವಿಜಯ್ ದೇವರಕೊಂಡ ಜೊತೆ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ. ಇವರಿಬ್ಬರ ನಿಶ್ಚಿತಾರ್ಥ ಗುಟ್ಟಾಗಿ ನಡೆದಿದ್ದು, ಫೆಬ್ರವರಿಯಲ್ಲಿ ಮದುವೆ ಆಗಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಈ ಬಗ್ಗೆ ಇಬ್ಬರೂ ಅಧಿಕೃತ ಮಾಹಿತಿ ನೀಡದಿದ್ದರೂ, ವದಂತಿಗಳನ್ನು ತಳ್ಳಿಹಾಕಿಲ್ಲ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಹಳೆಯ ಕಹಿ ಘಟನೆಗಳನ್ನು ಮರೆತು ರಕ್ಷಿತ್ ಶೆಟ್ಟಿ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೆ, ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಪ್ರಮೋದ್ ಶೆಟ್ಟಿ ಅವರ ಈ ಹೇಳಿಕೆ, ಹಳೆಯ ಗಾಸಿಪ್‌ಗಳಿಗೆ ಒಂದು ಸ್ಪಷ್ಟನೆ ನೀಡಿದಂತೂ ಸುಳ್ಳಲ್ಲ.








