ಬೆಂಗಳೂರು : ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಗಳ ಮೇಲೆ ಸರ್ಪ್ರೈಸ್ ಬರುತ್ತಿವೆ. ಒಂದೆಡೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ವಿಶ್ ಮಾಡುತ್ತಿದ್ದರೆ, ಇನ್ನೊಂದೆಡೆ ಅವರ ಸಿನಿಮಾ ತಂಡಗಳಿಂದ ಅಭಿಮಾನಿಗಳಿಗೆ ಉಡುಗೊರೆ ನೀಡುತ್ತಿದ್ದಾರೆ.
ಲಾಕ್ ಡೌನ್ ಹಿನ್ನೆಲೆ ರಕ್ಷಿತ್ ಶೆಟ್ಟಿ ಮನೆಯವರೊಂದಿಗೆ ಕೇಕ್ ಕತ್ತರಿಸಿ ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇತ್ತ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಇದರ ಮಧ್ಯೆ ರಕ್ಷಿತ್ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಮತ್ತೊಂದೆಡೆ ಅವರದ್ದೇ ತಂಡ ಪರಂವಃ ಸ್ಟುಡಿಯೋಸ್ ‘777 ಚಾರ್ಲಿ’ ಸಿನಿಮಾದ ವಿಡಿಯೋ ತುಣಕನ್ನು ಬಿಡುಗಡೆ ಮಾಡಿದೆ.
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಪೋಸ್ಟರ್ ನಲ್ಲಿ ರಕ್ಷಿತ್ ಶೆಟ್ಟಿಯವರನ್ನು ಖೈದಿ ರಿಜಿಸ್ಟರ್ ನಲ್ಲಿ ತೋರಿಸುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಇನ್ನು 777 ಚಾರ್ಲಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಯನ್ನು ಧರ್ಮನ ಪಾತ್ರದಲ್ಲಿ ಪರಿಚಯಿಸಿದ್ದು, ನಾಯಿಯನ್ನು ಚಾರ್ಲಿ ಎಂದು ಪರಿಚಯಿಸಿದ್ದಾರೆ. ಇವರಿಬ್ಬರ ಕಾಂಬಿನೇಶನ್ ಕುರಿತು ಈ ವಿಡಿಯೋದಲ್ಲಿ ಕುತೂಹಲ ಮೂಡಿಸಲಾಗಿದೆ. 777 ಚಾರ್ಲಿ ಸಿನಿಮಾದಲ್ಲಿ ಮನೆ, ಫ್ಯಾಕ್ಟರಿ, ಗಲಾಟೆ, ಇಡ್ಲಿ, ಸಿಗರೇಟ್, ಬಿಯರ್ ಎಂಬುದನ್ನು ಹೆಚ್ಚು ತೋರಿಸಲಾಗಿದೆ.
ಈ ಎರಡು ಚಿತ್ರಗಳ ಮಧ್ಯೆ ರಕ್ಷಿತ್ ಶೆಟ್ಟಿ ತಾವೇ ನಿರ್ದೇಶಿಸಲು ಕಥೆ ಹೆಣೆಯುತ್ತಿದ್ದು, ಪುಣ್ಯಕೋಟಿ ಸ್ಕ್ರಿಪ್ಟ್ ಬರೆಯುವುದರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.








