ಅಯೋಧ್ಯೆ : 500 ವರ್ಷಗಳ ಸಂಘರ್ಷ ಅಂತ್ಯವಾಗಿದೆ. ಶತಕೋಟಿ ಭಾರತೀಯರ ಕನಸು ಇಂದು ನನಸಾಗಿದೆ. ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ರಾಮಮಂದಿರಕ್ಕೆ ಇಂದು ಮಧ್ಯಾಹ್ನ 12 ಗಂಟೆ 44 ನಿಮಿಷ 8 ಸೆಕೆಂಡ್ ನಿಂದ 12 ಗಂಟೆ 44 ನಿಮಿಷ 40 ಸೆಕೆಂಡ್ ವರೆಗೂ ಸಲ್ಲಿದ ಅಭಿಜಿನ್ ಲಗ್ನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ.

ಅಯೋಧ್ಯೆಯಲ್ಲಿ 40 ಕೆಜಿಯ ಬೆಳ್ಳಿ ಇಟ್ಟಿಗೆ ಇಟ್ಟು ಶ್ರೀರಾಮ ಮಂದಿರಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸುತ್ತಿದ್ದಂತೆ ಎಲ್ಲೆಲ್ಲೂ ಶ್ರೀರಾಮನ ಜಪ ಮಾಡಲಾಯಿತು. ಪ್ರತಿಯೊಬ್ಬರ ಬಾಯಲ್ಲೂ ಜೈ ಶ್ರೀರಾಮ್ ಎಂಬ ಘೋಷಣೆಗಳು ಮೊಳಗಿದವು. ಒಂದು ಕ್ಷಣ ದೇಶಕ್ಕೆ ದೇಶವೇ ರಾಮನ ಜಪದಲ್ಲಿ ತೊಡಗಿತ್ತು. ಸಾಧುಸಂತರು, ಧಾರ್ಮಿಕ ಮುಖಂಡರ ವೇದಮಂತ್ರ, ಹೋಮಹವನ, ಜಪತಪ ಹಾಗೂ ಗಂಗಾ, ಕಾವೇರಿ, ಯಮುನಾ ಸೇರಿದಂತೆ ಜೀವನದಿನಗಳ ಜಲಾಭಿಷೇಕ ನಡೆಸಲಾಯಿತು. ರಾಮ ಮಂದಿರದ ಶಿಲಾನ್ಯಾಸಕ್ಕೆ 9 ಇಟ್ಟಿಗೆಗಳ ಬಳಕೆಯಾಯಿತು.








