ಶ್ವಾಸಕೋಶ ಮತ್ತು ಮೂತ್ರಪಿಂಡದ ಸಮಸ್ಯೆಯಿಂದ ರಾಮ್ ವಿಲಾಸ್ ಪಾಸ್ವಾನ್ ಆಸ್ಪತ್ರೆಗೆ ದಾಖಲು
ಹೊಸದಿಲ್ಲಿ, ಅಗಸ್ಟ್24: ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಶ್ವಾಸಕೋಶ ಸಂಬಂಧಿ ತೊಂದರೆ ಮತ್ತು ತೀವ್ರ ಮೂತ್ರಪಿಂಡ ವೈಫಲ್ಯದಿಂದ ಫೋರ್ಟಿಸ್ ಎಸ್ಕೋರ್ಟ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯ ವೈದ್ಯರು ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದು, ತಜ್ಞ ವೈದ್ಯರು ಅವರ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಿದ್ದಾರೆ ಎಂದು ಹೇಳಿದ್ದಾರೆ.
ಸಚಿವರಿಗೆ ಈ ಮೊದಲೇ ಹೃದಯ ಸಂಬಂಧಿ ತೊಂದರೆಗಳು ಕಾಣಿಸಿಕೊಂಡಿತ್ತು ಎಂದು ವೈದ್ಯರು ತಿಳಿಸಿದ್ದು, ಸಾಧನವನ್ನು ಅಳವಡಿಸುವ ಮೂಲಕ ಹೃದಯ ಕವಾಟವನ್ನು ಸರಿಪಡಿಸಲು 2017 ರಲ್ಲಿ ಪಾಸ್ವಾನ್ ಲಂಡನ್‌ನಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಮೊದಲು ಅವರು ಆಂಜಿಯೋಪ್ಲ್ಯಾಸ್ಟಿ, ಮಿಟ್ರಲ್ ವಾಲ್ವ್ ಕ್ಲಿಪ್‌ಗೆ ಒಳಗಾಗಿದ್ದರು ಎಂದು ತಿಳಿಸಿದ್ದಾರೆ.
ಅವರು ಅನೇಕ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಾರೆ. ಸಚಿವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಅವರ ಸ್ಥಿತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ವೈದ್ಯರೊಬ್ಬರು ಮಾಹಿತಿ ನೀಡಿದರು.