ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಖಾತೆಗೆ ಅಪರಿಚಿತರು ಲಕ್ಷಾಂತರ ರೂಪಾಯಿ ಕನ್ನಾ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ರಾಜಧಾನಿ ಲಖನೌನ ಎರಡು ಪ್ರತ್ಯೇಕ ಬ್ಯಾಂಕ್ ಗಳಿಂದ ಚೆಕ್ ಮೂಲಕ 2 ಬಾರಿ ಹಣ ವಿತ್ ಡ್ರಾ ಮಾಡಲಾಗಿದೆ. ಇದೀಗ ಮೂರನೇ ಬಾರಿಗೆ ಹಣ ಹಿಂಪಡೆಯಲು ಪ್ರಯತ್ನಿಸಿದಾಗ, ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ದೂರವಾಣಿ ಮೂಲಕ ಈ ಬಗ್ಗೆ ಮಾಹಿತಿ ನೀಡಲಾಗಿದೆ.
ಮೂಲಗಳ ಪ್ರಕಾರ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ನ ಖಾತೆಯಿಂದ ಸುಮಾರು 6 ಲಕ್ಷ ರೂಪಾಯಿಗಳನ್ನು ವಿತ್ ಡ್ರಾ ಮಾಡಲಾಗಿದೆ. ಸೆಪ್ಟೆಂಬರ್ 1 ರಂದು ಲಖನೌದ ಬ್ಯಾಂಕಿನಿಂದ ಒಂದೂವರೆ ಲಕ್ಷ ರೂಪಾಯಿಗಳನ್ನು ಹಿಂಪಡೆಯಲಾಗಿದೆ. ಎರಡು ದಿನಗಳ ನಂತರ ಮೂರೂವರೆ ಲಕ್ಷ ರೂಪಾಯಿಗಳನ್ನು ಹಿಂಪಡೆಯಲಾಗಿದೆ. ಮೂರನೇ ಬಾರಿಗೆ ಲಖನೌದ ಬ್ಯಾಂಕ್ ಆಫ್ ಬರೋಡಾದಲ್ಲಿ 9 ಲಕ್ಷ 86 ಸಾವಿರ ಚೆಕ್ ವಿತ್ ಡ್ರಾ ಮಾಡುವ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಕೊಟ್ವಾಲಿ ಅಯೋಧ್ಯೆಯಲ್ಲಿ ಅಪರಿಚಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.








