Ramnagar | ಪಿಎಫ್ಐ ನಿಷೇಧ ಸ್ವಾಗತಾರ್ಹ : ಅಶ್ವತ್ಥನಾರಾಯಣ
ರಾಮನಗರ : ಸಮಾಜ ಮತ್ತು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಪಿಎಫ್ಐ ಮತ್ತು ಅದರ 8 ಅಂಗಸಂಸ್ಥೆಗಳನ್ನು 5 ವರ್ಷಗಳ ಮಟ್ಟಿಗೆ ನಿಷೇಧಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಇಡೀ ದೇಶವೇ ಸ್ವಾಗತಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಘಟನೆಯು ಬೇರೆ ಯಾವುದೇ ರೂಪದಲ್ಲಿ ತಲೆ ಎತ್ತದಂತೆ ತೀವ್ರ ನಿಗಾ ವಹಿಸಲಾಗುವುದು ಎಂದರು.
ಪಿಎಫ್ಐ ಸಂಘಟನೆಯು ವಿದೇಶಿ ಜಾಲಗಳ ಮೂಲಕ ಅಕ್ರಮ ನೆರವು ಪಡೆದುಕೊಳ್ಳುತ್ತಿತ್ತು. ಈ ಮೂಲಕ ದೇಶದಲ್ಲಿ ಧಾರ್ಮಿಕ ಸಂಘರ್ಷ ಉಂಟುಮಾಡಲು ಅದು ಸಂಚು ರೂಪಿಸುತ್ತಿತ್ತು ಎಂದು ಅವರು ವಿವರಿಸಿದ್ದಾರೆ.

ಕೇಂದ್ರ ಸರ್ಕಾರವು ಪಿಎಫ್ ಐ ಸಂಘಟನೆಯ ವಿಧ್ವಂಸಕ ಚಟುವಟಿಕೆಗಳು ಹಾಗೂ ಅನುಮಾನಾಸ್ಪದ ಹಣಕಾಸು ವ್ಯವಹಾರಗಳ ಮೇಲೆ ಹದ್ದಿನ ಕಣ್ಣಿಟ್ಟಿತ್ತು.
ಇದರ ಬೆನ್ನಲ್ಲೇ ಎರಡು ದಿವಸಗಳ ಹಿಂದೆ ದೇಶಾದ್ಯಂತ ಆ ಸಂಘಟನೆಯ ಕಚೇರಿಗಳು ಮತ್ತು ನಾಯಕರ ಮೇಲೆ ಎನ್ಐಎ ದಾಳಿ ನಡೆಸಲಾಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಮಾಜ ಮತ್ತು ದೇಶದ ಹಿತಕ್ಕೆ ವಿರುದ್ಧವಾಗಿ ವರ್ತಿಸುವ ಯಾವ ಸಂಘಟನೆಗಳನ್ನು ಕೂಡ ಬಿಡುವುದಿಲ್ಲ. .
ಕೇಂದ್ರ ಸರ್ಕಾರದ ದಾಳಿಯ ಬೆನ್ನಲ್ಲೇ ರಾಜ್ಯ ಪೊಲೀಸರು ಕೂಡ ಮಂಗಳವಾರ 15ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದರು ಎಂದು ಅವರು ಸ್ಪಷ್ಟಪಡಿಸಿದರು.









